ದಾವಣಗೆರೆ: ದಾವಣಗೆರೆ ಜಿಲ್ಲಾ ಆಸ್ಪತ್ರೆಯ ಆಪರೇಷನ್ ಥಿಯೇಟರ್ನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಮಾನವ ನಿರ್ಲಕ್ಷ್ಯವೇ ಕಾರಣವೇ ಎಂಬ ಅನುಮಾನಕ್ಕೆ ಇದೀಗ ತನಿಖೆಯೇ ಬಲ ತುಂಬಿದೆ. ಬಳಸಲು ಯೋಗ್ಯವಲ್ಲದ ವೈದ್ಯಕೀಯ ಯಂತ್ರೋಪಕರಣಗಳನ್ನು ಕಾರ್ಯಾಚರಣೆಗೆ ಬಳಸಿದ್ದೇ ಅವಘಡಕ್ಕೆ ಕಾರಣ ಎಂಬ ಆಘಾತಕಾರಿ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆಯಂತೆ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ನೇತೃತ್ವದ ತನಿಖಾ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಅಗ್ನಿ ಕಾಣಿಸಿಕೊಂಡ ಆಪರೇಷನ್ ಥಿಯೇಟರ್ನಲ್ಲಿದ್ದ ಅರಿವಳಿಕೆ ವರ್ಕ್ ಸ್ಟೇಷನ್ ಸೇರಿದಂತೆ ಹಲವು ಪ್ರಮುಖ ಸಾಧನಗಳು ತಾಂತ್ರಿಕ ದೋಷದಿಂದ ಬಳಲುತ್ತಿದ್ದವು ಎಂದು ಪತ್ತೆಯಾಗಿದೆ.
ಯಂತ್ರಗಳಿಗೆ ಅಳವಡಿಸಿದ್ದ ಬ್ಯಾಟರಿಗಳು ಸಂಪೂರ್ಣ ಹಾಳಾಗಿದ್ದರೂ ಅವುಗಳನ್ನು ಬದಲಾಯಿಸದಿರುವುದು ತನಿಖೆಯ ಪ್ರಮುಖ ಅಂಶವಾಗಿದೆ. ನಿರ್ವಹಣೆ ಹೊತ್ತಿದ್ದ ಖಾಸಗಿ ಏಜೆನ್ಸಿ ಈ ಬಗ್ಗೆ ಮೊದಲೇ ಆಸ್ಪತ್ರೆ ಆಡಳಿತಕ್ಕೆ ಲಿಖಿತ ಎಚ್ಚರಿಕೆ ನೀಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸದೇ ಅದೇ ಯಂತ್ರಗಳನ್ನು ಬಳಸಲಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖವಾಗಿದೆ. ಈ ನಿರ್ಲಕ್ಷ್ಯವೇ ಜೂನ್ 30ರಂದು ಸಂಭವಿಸಿದ ಅಗ್ನಿ ಅವಘಡಕ್ಕೆ ಕಾರಣವಾಗಿರಬಹುದು ಎಂದು ತನಿಖಾ ತಂಡ ಶಂಕಿಸಿದೆ.
ಪ್ರಕರಣವನ್ನು ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಚಿವ ಯುಟಿ ಖಾದರ್ ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಸಚಿವರ ಸೂಚನೆಯಂತೆ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳ ತಂಡ ಆಸ್ಪತ್ರೆಗೆ ಭೇಟಿ ನೀಡಿ, ಮುಖ್ಯ ವೈದ್ಯರು, ನರ್ಸಿಂಗ್ ಸಿಬ್ಬಂದಿ ಹಾಗೂ ತಾಂತ್ರಿಕ ಸಿಬ್ಬಂದಿಯಿಂದ ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಿದೆ.
ಉಪ ವಿಭಾಗಾಧಿಕಾರಿಗಳ ಅಂತಿಮ ವರದಿ ಜಿಲ್ಲಾಧಿಕಾರಿಗಳ ಕೈ ಸೇರಿದ ಬಳಿಕ ತಪ್ಪಿತಸ್ಥ ಅಧಿಕಾರಿಗಳು, ವೈದ್ಯರು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗುವ ಸಾಧ್ಯತೆ ದಟ್ಟವಾಗಿದೆ.



