ವಿಜಯಪುರ: ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಬಾಬುಸಾಬ್ ಜಮಾದಾರ್ (35) ಎಂದು ಗುರುತಿಸಲಾಗಿದೆ.
ಐದು ವರ್ಷಗಳ ಹಿಂದೆ ಬಾಬುಸಾಬ್ ಅವರು ತಮ್ಮ ಸ್ವಂತ ಸಹೋದರಿ ಮೀನಾಕ್ಷಿ ಅವರ ಮಗಳು ಸೌಂದರ್ಯಳನ್ನು ವಿವಾಹವಾಗಿದ್ದರು. ಕಳೆದ ಐದು ತಿಂಗಳಿಂದ ದಂಪತಿ ನಡುವೆ ಕಲಹ ಉಂಟಾಗಿ ಸೌಂದರ್ಯ ತವರು ಮನೆಯಲ್ಲಿ ವಾಸವಾಗಿದ್ದಳು.
ನಿನ್ನೆ ರಾತ್ರಿ ಪತ್ನಿಯನ್ನು ವಾಪಸ್ ಕರೆದುಕೊಂಡು ಹೋಗಲು ಬಾಬುಸಾಬ್, ತಮ್ಮ ಸ್ನೇಹಿತ ಅಪ್ಪಾಲಾಲ ಮಕಾಸಿ ಜೊತೆ ಹಲಸಂಗಿಗೆ ಬಂದಿದ್ದರು. ಈ ವೇಳೆ ನಡೆದ ಮಾತಿನ ಚಕಮಕಿ ಗಲಾಟೆಗೆ ತಿರುಗಿದೆ ಎನ್ನಲಾಗಿದೆ.
ಸೌಂದರ್ಯಳ ತಾಯಿ ಮೀನಾಕ್ಷಿ, ಸಹೋದರ ವಿಕಾಸ್ ಹಾಗೂ ರಫೀಕ್ ಸೇರಿ ಬಾಬುಸಾಬ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಬುಸಾಬ್ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಸ್ನೇಹಿತ ಅಪ್ಪಾಲಾಲ ಮಕಾಸಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಬಳಿಕ ಆರೋಪಿತರು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇನ್ಸ್‌ಪೆಕ್ಟರ್ ಪರಶುರಾಮ ಮನಗೂಳಿ ಹಾಗೂ ಝಳಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



