ವಿಜಯಸಾಕ್ಷಿ ಸುದ್ದಿ, ಗದಗ: ಕನಿಷ್ಠ ವೇತನ ಜಾರಿ, ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗದಗ-ಬೆಟಗೇರಿ ನಗರಸಭೆಯ ಮಹಿಳಾ ಪೌರ ಕಾರ್ಮಿಕರು ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಲವು ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಕಾರ್ಮಿಕರು, ಸರ್ಕಾರ ಹಾಗೂ ಜಿಲ್ಲಾಡಳಿತ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು. ನಗರ ಸ್ವಚ್ಛತೆಗಾಗಿ ಹಲವು ವರ್ಷಗಳಿಂದ ದುಡಿಯುತ್ತಿದ್ದರೂ ಕನಿಷ್ಠ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ದುಡಿಮೆಗೆ ತಕ್ಕ ವೇತನ ಹಾಗೂ ಸೇವಾ ಭದ್ರತೆ ನೀಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಮಹಿಳಾ ಪೌರ ಕಾರ್ಮಿಕರು ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ಪ್ರಮುಖ ವೃತ್ತದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಕೆಲಕಾಲ ಸಂಚಾರ ದಟ್ಟಣೆಯೂ ಉಂಟಾಯಿತು.
ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳಾ ಪೌರ ಕಾರ್ಮಿಕ ಜ್ಯೋತಿ ಹೊಸಳ್ಳಿ ಏಕಾಏಕಿ ಕುಸಿದು ಬಿದ್ದರು. ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಆದರೆ, ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ಬಡ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು. ನಮ್ಮ ದುಡಿಮೆಗೆ ತಕ್ಕ ಕನಿಷ್ಠ ವೇತನ ಹಾಗೂ ಸೇವಾ ಭದ್ರತೆ ನೀಡಬೇಕು. ಪ್ರತಿಭಟನೆ ವೇಳೆ ಅಸ್ವಸ್ಥಗೊಂಡ ಕಾರ್ಮಿಕ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ಕೂಡ ತಡವಾಗಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜ್ಯೋತಿ ಹೊಸಳ್ಳಿ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ತಮ್ಮ ಬೇಡಿಕೆಗಳ ಕುರಿತು ಹಿರಿಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸ್ಪಷ್ಟ ಭರವಸೆ ನೀಡಬೇಕು ಎಂದು ಕಾರ್ಮಿಕರು ಪಟ್ಟು ಹಿಡಿದರು. ಬಳಿಕ ಸ್ಥಳಕ್ಕೆ ನಗರಸಭೆ ಕಮಿಷನರ್ ರಾಜಾರಾಂ ಪವಾರ ಆಗಮಿಸಿದಾಗ, ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಕಾರ್ಮಿಕರು ಅವರನ್ನು ತರಾಟೆಗೆ ತೆಗೆದುಕೊಂಡರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಕಮಿಷನರ್, ಕಾರ್ಮಿಕರ ಬೇಡಿಕೆಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ ಕಾರ್ಮಿಕರು ಪ್ರತಿಭಟನೆ ಹಾಗೂ ರಸ್ತೆ ತಡೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಕೃಷ್ಣಾ ಪರಾಪೂರ, ಅಶೋಕ ಕುಡತಿನ್ನಿ, ಗಣೇಶ ಹುಬ್ಬಳ್ಳಿ, ಎಸ್.ಎನ್. ಬಳ್ಳಾರಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಧರಣಿ ಸ್ಥಳಕ್ಕೆ ಶಾಸಕ ಎಚ್.ಕೆ. ಪಾಟೀಲ ಭೇಟಿ
ನಗರಸಭೆ ಎದುರು ಮಹಿಳಾ ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಎಚ್.ಕೆ. ಪಾಟೀಲ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಕಾರ್ಮಿಕರ ನ್ಯಾಯಯುತ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು ಎಂದು ಭರವಸೆ ನೀಡಿದರು.



