HomeGadag Newsನೀಟ್‌–ಎನ್‌ಟಿಎ ರದ್ದತಿಗೆ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ!

ನೀಟ್‌–ಎನ್‌ಟಿಎ ರದ್ದತಿಗೆ ವಿಧಾನಸಭೆಯಲ್ಲಿ ನಿರ್ಣಯಕ್ಕೆ ಆಗ್ರಹ!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ/ಹುಬ್ಬಳ್ಳಿ: ನೀಟ್‌ ಪರೀಕ್ಷೆಯಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮ ಹಾಗೂ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯಲ್ಲಿನ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನೀಟ್‌ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಕರ್ನಾಟಕ ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಬೇಕು ಎಂದು ಕರ್ನಾಟಕ ನಾಗರಿಕ ಸಮಾಜ ಆಗ್ರಹಿಸಿದೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಿರುವ ನಾಗರಿಕ ಸಮಾಜದ ಗಣ್ಯರು, ವೈದ್ಯಕೀಯ ಪ್ರವೇಶದ ನೀತಿ ಮತ್ತು ಪ್ರಕ್ರಿಯೆಯನ್ನು ರಾಜ್ಯಗಳಿಗೆ ಮರಳಿ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಾಹಿತಿ ಹಾಗೂ ಪ್ರಕಾಶಕ ಬಸವರಾಜ ಸೂಳಿಭಾವಿ ಅವರು ಪತ್ರಿಕೆಯ ಪ್ರಕಟಣೆಗಾಗಿ ಮನವಿಯ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.

ಮನವಿಯಲ್ಲಿ, ನೀಟ್‌ ಕಡ್ಡಾಯಗೊಳಿಸಿರುವುದರಿಂದ ರಾಜ್ಯಗಳ ಶೈಕ್ಷಣಿಕ ಸ್ವಾಯತ್ತತೆ, ಸಾಮಾಜಿಕ ನ್ಯಾಯ ಹಾಗೂ ಸಮಾನ ಅವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಲಾಗಿದೆ. ವಿಭಿನ್ನ ಪಠ್ಯಕ್ರಮ, ಭಾಷೆ, ಗ್ರಾಮೀಣ–ನಗರ ಅಸಮಾನತೆ ಹಾಗೂ ಸಾಮಾಜಿಕ–ಆರ್ಥಿಕ ಹಿನ್ನೆಲೆಯ ವಿದ್ಯಾರ್ಥಿಗಳನ್ನು ಒಂದೇ ಪರೀಕ್ಷೆಯ ಮೂಲಕ ಅಳೆಯುವುದು ವಾಸ್ತವ ಸಮಾನತೆಯನ್ನು ಸಾಧಿಸುವುದಿಲ್ಲ ಎಂದು ಹೇಳಲಾಗಿದೆ.

ವಿದ್ಯಾರ್ಥಿಗಳ ಎರಡು ವರ್ಷಗಳ ಶಾಲಾ ಶಿಕ್ಷಣ, ನಿರಂತರ ಕಲಿಕೆ ಮತ್ತು ಪರಿಶ್ರಮವನ್ನು ಒಂದೇ ದಿನದ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಗೆ ಸೀಮಿತಗೊಳಿಸುವುದರಿಂದ ಶಾಲಾ ಶಿಕ್ಷಣದ ಮಹತ್ವ ಕುಗ್ಗುತ್ತಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ದುಬಾರಿ ಕೋಚಿಂಗ್ ಪಡೆಯುವ ಸಾಮರ್ಥ್ಯ ಹೊಂದಿರುವ ನಗರ ಪ್ರದೇಶದ ಹಾಗೂ ಆರ್ಥಿಕವಾಗಿ ಸಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಸರ್ಕಾರಿ ಶಾಲೆ, ಗ್ರಾಮೀಣ ಪ್ರದೇಶ, ಕನ್ನಡ ಮಾಧ್ಯಮ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಅಸಮಾನ ಸ್ಪರ್ಧೆ ಎದುರಾಗುತ್ತಿದೆ ಎಂದು ನಾಗರಿಕ ಸಮಾಜದ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ನಿರ್ವಹಣೆಯ ಲೋಪ ಹಾಗೂ ಅಂಕಗಳ ವಿಶ್ವಾಸಾರ್ಹತೆ ಕುರಿತು ಪದೇಪದೇ ವಿವಾದಗಳು ಎದುರಾಗಿರುವ ಹಿನ್ನೆಲೆಯಲ್ಲಿ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಮರುಪರಿಶೀಲಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ವೈದ್ಯಕೀಯ ಕಾಲೇಜುಗಳಿಗೆ ದ್ವಿತೀಯ ಪಿಯುಸಿ ಅಥವಾ +2ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಪಡೆದ ಅಂಕಗಳ ಆಧಾರದ ಮೇಲೆ, ವೈಜ್ಞಾನಿಕ ನಾರ್ಮಲೈಸೇಶನ್ ಹಾಗೂ ಸಂವಿಧಾನಬದ್ಧ ಮೀಸಲಾತಿ ನಿಯಮಗಳನ್ನು ಪಾಲಿಸಿ ಪ್ರವೇಶ ನೀಡುವ ರಾಜ್ಯ ನೀತಿ ರೂಪಿಸಬೇಕು ಎಂದು ಆಗ್ರಹಿಸಲಾಗಿದೆ.

ತಮಿಳುನಾಡು ವಿಧಾನಸಭೆ ಈಗಾಗಲೇ ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ಪಡೆಯುವ ನಿಟ್ಟಿನಲ್ಲಿ ನಿರ್ಣಯ ಹಾಗೂ ಶಾಸನಾತ್ಮಕ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿರುವ ನಾಗರಿಕ ಸಮಾಜ, ಕರ್ನಾಟಕವೂ ಇದೇ ಮಾದರಿಯಲ್ಲಿ ರಾಜ್ಯದ ಹಕ್ಕು ಮತ್ತು ಸಾಮಾಜಿಕ ನ್ಯಾಯದ ಪರವಾಗಿ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದೆ.

ಕರ್ನಾಟಕ ವಿಧಾನಮಂಡಲ ಅಧಿವೇಶನದಲ್ಲಿ ನೀಟ್‌ ರದ್ದತಿಗೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯ ಅಂಗೀಕರಿಸುವುದು, ಎನ್‌ಟಿಎ ರದ್ದುಗೊಳಿಸಿ ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುವುದು, ಪಿಯುಸಿ ಅಂಕ ಆಧಾರಿತ ವೈದ್ಯಕೀಯ ಪ್ರವೇಶ ನೀತಿ ರೂಪಿಸುವುದು ಸೇರಿದಂತೆ ಆರು ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ಮುಂದಿಡಲಾಗಿದೆ.

ಇದರ ಜತೆಗೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ತಜ್ಞರು, ವೈದ್ಯಕೀಯ ಶಿಕ್ಷಣ ಪರಿಣತರು ಹಾಗೂ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು. ನೀಟ್‌ ವಿರೋಧಿ ನಿಲುವು ಹೊಂದಿರುವ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಿ ರಾಜ್ಯಗಳ ಶೈಕ್ಷಣಿಕ ಹಕ್ಕು ಹಾಗೂ ಒಕ್ಕೂಟ ವ್ಯವಸ್ಥೆಯ ರಕ್ಷಣೆಗೆ ರಾಷ್ಟ್ರಮಟ್ಟದ ಪ್ರಯತ್ನ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.

ಮನವಿಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನ್ಯಾ. ಗೋಪಾಲಗೌಡ, ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ., ಸಾಹಿತಿ ಬಸವರಾಜ ಸೂಳಿಭಾವಿ, ಪತ್ರಕರ್ತ ರಾಜಾರಾಮ ತಲ್ಲೂರು, ಸಾಹಿತಿ ಡಾ. ಎಚ್.ಎಸ್. ಅನುಪಮಾ, ವಿಶ್ರಾಂತ ಉಪಕುಲಪತಿ ಡಾ. ಸಬಿಹಾ ಭೂಮಿಗೌಡ, ಸಾಹಿತಿಗಳಾದ ಮೂಡ್ನಾಕೂಡ ಚಿನ್ನಸ್ವಾಮಿ, ಕೆ. ನೀಲಾ, ರಹಮತ್ ತರೀಕೆರೆ, ಪ್ರೊ. ಅಶೋಕ ಶೆಟ್ಟರ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರಗಳ 117 ಗಣ್ಯರು ಸಹಿ ಹಾಕಿದ್ದಾರೆ.

ಕರ್ನಾಟಕದ ವಿದ್ಯಾರ್ಥಿಗಳ ಭವಿಷ್ಯ ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಲು ರಾಜ್ಯ ಸರ್ಕಾರ ಈ ಕುರಿತು ತಕ್ಷಣ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕ ಸಮಾಜದ ಪ್ರತಿನಿಧಿಗಳು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.

ನಾಗರಿಕ ಸಮಾಜದ ಪ್ರಮುಖ ಆಗ್ರಹಗಳು

  • ನೀಟ್‌ ಪರೀಕ್ಷೆ ರದ್ದುಪಡಿಸಿ, ವೈದ್ಯಕೀಯ ಪ್ರವೇಶದ ಅಧಿಕಾರವನ್ನು ರಾಜ್ಯಗಳಿಗೆ ಮರಳಿಸಬೇಕು.
  • ಎನ್‌ಟಿಎ ರದ್ದುಗೊಳಿಸಿ, ಕೇಂದ್ರೀಕೃತ ಪ್ರವೇಶ ಪರೀಕ್ಷಾ ವ್ಯವಸ್ಥೆಯನ್ನು ಮರುಪರಿಶೀಲಿಸಬೇಕು.
  • ದ್ವಿತೀಯ ಪಿಯುಸಿ/+2 ಅಂಕಗಳ ಆಧಾರದ ಮೇಲೆ ವೈದ್ಯಕೀಯ ಪ್ರವೇಶಕ್ಕೆ ರಾಜ್ಯ ನೀತಿ ರೂಪಿಸಬೇಕು.
  • ಸಂವಿಧಾನದ ಅನುಚ್ಛೇದ 254(2)ರಡಿ ಪ್ರತ್ಯೇಕ ಮಸೂದೆ ರೂಪಿಸಿ ರಾಷ್ಟ್ರಪತಿಯ ಅನುಮೋದನೆಗೆ ಕಳುಹಿಸಬೇಕು.
  • ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ತಜ್ಞರೊಂದಿಗೆ ಸಾರ್ವಜನಿಕ ಸಮಾಲೋಚನೆ ನಡೆಸಬೇಕು.
  • ನೀಟ್‌ ವಿರೋಧಿ ನಿಲುವಿನ ಇತರ ರಾಜ್ಯಗಳೊಂದಿಗೆ ಸಮನ್ವಯ ಸಾಧಿಸಬೇಕು.
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img