ಚಿಕ್ಕಬಳ್ಳಾಪುರ: ಜಮೀನು ಮಾರಾಟ ಮಾಡಿದ ಬಳಿಕ ಬಾಕಿ ಹಣ ಕೈಸೇರದೆ ಮಾನಸಿಕವಾಗಿ ನೊಂದಿದ್ದ ರೈತ ಸಂಘದ ತಾಲೂಕು ಅಧ್ಯಕ್ಷರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಮರಳುಕುಂಟೆ ರಾಮಾಂಜಿನಪ್ಪ ಅವರು ನಗರದ ವಾಪಸಂದ್ರ ಬಡಾವಣೆಯಲ್ಲಿರುವ ರೈತ ಸಂಘದ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಚೇರಿಯ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ರೈತ ಸಂಘದ ಕಚೇರಿ ವಾಪಸಂದ್ರ ಬಡಾವಣೆಯ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೇಲ್ಭಾಗದಲ್ಲಿದ್ದು, ಅಲ್ಲಿಯೇ ಘಟನೆ ನಡೆದಿದೆ. ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
19.50 ಲಕ್ಷ ರೂ. ಬಾಕಿ ಹಣ ನೀಡದೆ ಸತಾಯಿಸಿದ ಆರೋಪ:
ಪೊಲೀಸರು ವಶಪಡಿಸಿಕೊಂಡಿರುವ ಡೆತ್ನೋಟ್ನಲ್ಲಿ ಜಮೀನು ಮಾರಾಟದ ಬಳಿಕ ಬರಬೇಕಿದ್ದ ಬಾಕಿ ಹಣ ಸಿಗದೆ ಮಾನಸಿಕವಾಗಿ ನೊಂದು ಈ ನಿರ್ಧಾರ ಕೈಗೊಂಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ರಾಮಾಂಜಿನಪ್ಪ ಅವರು ತಮ್ಮ ಮಾಲೀಕತ್ವದ 35 ಗುಂಟೆ ಜಮೀನನ್ನು ರವೀಂದ್ರರೆಡ್ಡಿ ಎಂಬವರಿಗೆ ಒಟ್ಟು 77 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು ಎನ್ನಲಾಗಿದೆ. ಜಮೀನು ಖರೀದಿಸಿದ್ದ ವ್ಯಕ್ತಿ ಮುಂಗಡ ಹಾಗೂ ವಿವಿಧ ಕಂತುಗಳ ರೂಪದಲ್ಲಿ 57.50 ಲಕ್ಷ ರೂಪಾಯಿ ಪಾವತಿಸಿದ್ದು, ಉಳಿದ 19.50 ಲಕ್ಷ ರೂಪಾಯಿ ಹಣವನ್ನು ಪಾವತಿಸಿರಲಿಲ್ಲ ಎಂದು ಆರೋಪಿಸಲಾಗಿದೆ.
ಬಾಕಿ ಹಣವನ್ನು ನೀಡದೆ ಸುಮಾರು ಹತ್ತು ತಿಂಗಳಿನಿಂದ ಕಾಲಹರಣ ಮಾಡಲಾಗುತ್ತಿತ್ತು ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಬರಬೇಕಿದ್ದ ಹಣ ಕೈಸೇರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರಿಂದ ತೀವ್ರವಾಗಿ ನೊಂದಿದ್ದಾಗಿ ರಾಮಾಂಜಿನಪ್ಪ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಯಿತು.
ಡೆತ್ನೋಟ್ನಲ್ಲಿ ಉಲ್ಲೇಖವಾಗಿರುವ ಅಂಶಗಳನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜಮೀನು ಮಾರಾಟಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರ ಹಾಗೂ ಬಾಕಿ ಹಣ ಪಾವತಿಯಾಗದಿರುವ ಕುರಿತು ತನಿಖೆ ಮುಂದುವರಿಸಿದ್ದಾರೆ.



