ಗದಗ: ಸೀನಿಯರ್ ಸೆಕೆಂಡರಿ ನೇರ ಪರೀಕ್ಷೆಯ ಹೆಸರಿನಲ್ಲಿ ಗದಗ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದ್ದು, ಪರೀಕ್ಷಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಅಭ್ಯರ್ಥಿಗಳಿಂದ ಹಣ ಪಡೆದು ಪರೀಕ್ಷೆ ನಡೆಸಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಬೆಂಗಳೂರು ಮೂಲದ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ಮಂಡಳಿ ನಡೆಸುತ್ತಿರುವ ಪರೀಕ್ಷೆಗೆ ಕಳಸಾಪುರ ರಸ್ತೆಯ ಆರ್ಯಭಟ ಸ್ವತಂತ್ರ ಪದವಿ ಪೂರ್ವ ಕಾಲೇಜು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದರೆ ಪರೀಕ್ಷಾ ವ್ಯವಸ್ಥೆ ಪ್ರಶ್ನಾರ್ಹವಾಗಿದ್ದು, ಅಭ್ಯರ್ಥಿಗಳನ್ನು ಚಿಕ್ಕ ಕೊಠಡಿಗಳಲ್ಲಿ ಕಿಕ್ಕಿರಿದು ಕೂರಿಸಲಾಗಿದೆ ಎಂದು ಆರೋಪಿಸಲಾಗಿದೆ.
ಒಂದೇ ಕೊಠಡಿಯಲ್ಲಿ ಸುಮಾರು 48 ಅಭ್ಯರ್ಥಿಗಳನ್ನು ಕೂರಿಸಿ ಪರೀಕ್ಷೆ ನಡೆಸಲಾಗಿದ್ದು, ಒಟ್ಟು ಐದು ಕೊಠಡಿಗಳಲ್ಲಿ ಸುಮಾರು 240 ಮಂದಿ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಡೆಯುತ್ತಿದ್ದ ವೇಳೆ ಕೊಠಡಿಗಳ ಬಾಗಿಲುಗಳನ್ನು ಹೊರಗಿನಿಂದಲೇ ಲಾಕ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಇಂಗ್ಲಿಷ್ ಪರೀಕ್ಷೆಯ ವೇಳೆ ಮೇಲ್ವಿಚಾರಕರು ಪರೀಕ್ಷಾ ಕೊಠಡಿಯೊಳಗೇ ಮೊಬೈಲ್ ಫೋನ್ ಬಳಸುತ್ತಿದ್ದರು ಎನ್ನಲಾಗಿದ್ದು, ಇದು ಪರೀಕ್ಷಾ ನಿಯಮಗಳಿಗೆ ವಿರುದ್ಧವಾಗಿದೆ. ಅಭ್ಯರ್ಥಿಗಳಿಂದ ಹಣ ಪಡೆದು ಮನಬಂದಂತೆ ಪರೀಕ್ಷೆ ನಡೆಸಲಾಗಿದೆ ಎಂಬ ಆರೋಪವೂ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಘಟನೆ ಕುರಿತು ಮಾಹಿತಿ ತಿಳಿದು ಮಾಧ್ಯಮದವರು ಸ್ಥಳಕ್ಕೆ ತೆರಳಿದಾಗ ಸಿಬ್ಬಂದಿ ಚಿತ್ರೀಕರಣಕ್ಕೆ ಅಡ್ಡಿಪಡಿಸಿ, “ಇಲ್ಲಿ ಬರಬೇಡಿ, 100 ಮೀಟರ್ ದೂರ ನಿಲ್ಲಿ” ಎಂದು ವಾಗ್ವಾದ ನಡೆಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿದ ನಂತರವೇ ಪರೀಕ್ಷಾ ಕೊಠಡಿಗಳ ಬಾಗಿಲು ತೆರೆಯಲಾಯಿತು.
ಬಾಗಿಲು ತೆರೆದ ಬಳಿಕ ಪರೀಕ್ಷಾ ಕೇಂದ್ರದ ಒಳಗಿನ ವ್ಯವಸ್ಥೆ ಬಹಿರಂಗವಾಗಿದ್ದು, ನಿಯಮ ಉಲ್ಲಂಘನೆಯ ಹಲವು ಆರೋಪಗಳು ಮತ್ತಷ್ಟು ಬಲಗೊಂಡಿವೆ. ಈ ಕುರಿತು ಪ್ರಶ್ನಿಸಿದಾಗ, “ನಮಗೆ ಯಾವುದೇ ಅಧಿಕಾರಿಗಳು ಸಂಬಂಧಿಸುವುದಿಲ್ಲ. ನಾವು ಮತ್ತು ನಮ್ಮ ಇನ್ಸ್ಟಿಟ್ಯೂಟ್ವೇ ಇಲ್ಲಿ ಸುಪ್ರೀಂ” ಎಂದು ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದ್ದು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹ ಕೇಳಿಬರುತ್ತಿದೆ.



