ಹಗರಿಬೊಮ್ಮನಹಳ್ಳಿ: ತಾಲೂಕಿನ ಮೆಟ್ರಿ ಗ್ರಾಮದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಶುಕ್ರವಾರ ಸಂಜೆ ನಡೆದಿದೆ. ಗ್ರಾಮದ ಗಿರಿನಳ್ಳಿ ನಾಗಪ್ಪ (52) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.
ನಾಗಪ್ಪ ಅವರು ತಮ್ಮ ಮೂರು ಎಕರೆ ತೋಟದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ಘಟನೆ ನಡೆದಿದೆ. ತೋಟದಲ್ಲಿದ್ದ “ಆಂಕಳ ಮರದಮ್ಮ” ದೇವರ ಮರದ ಬಳಿ ಸಂಜೆ ನೈವೇದ್ಯ ಸಲ್ಲಿಸಿ ಗ್ರಾಮಸ್ಥರು ತೆರಳಿದ ಬಳಿಕ ನಾಗಪ್ಪ ತೋಟದತ್ತ ಹೋಗಿದ್ದರು ಎನ್ನಲಾಗಿದೆ.
ಸಂಜೆಯ ಬಿಸಿಲಿನ ತಾಪ ಹೆಚ್ಚಿದ್ದ ಹಿನ್ನೆಲೆಯಲ್ಲಿ ನಾಗಪ್ಪ ಮರದ ಆಶ್ರಯ ಪಡೆದಿದ್ದರು. ಇದೇ ವೇಳೆ ಸಂಜೆ 5 ಗಂಟೆ ಸುಮಾರಿಗೆ ಗುಡುಗು-ಸಿಡಿಲು ಸಹಿತ ಮಳೆ ಆರಂಭವಾಗಿದೆ.
ಮರದ ಒಂದು ಭಾಗಕ್ಕೆ ಸಿಡಿಲು ಅಪ್ಪಳಿಸಿದ ಪರಿಣಾಮ, ಮರದ ಕೆಳಗೆ ನಿಂತಿದ್ದ ನಾಗಪ್ಪ ಅವರಿಗೆ ಸಿಡಿಲು ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಪತ್ನಿಗೆ ಕಾದಿತ್ತು ಆಘಾತ
ಸಂಜೆಯಾದರೂ ಮನೆಗೆ ಮರಳದ ಹಿನ್ನೆಲೆಯಲ್ಲಿ ಪತ್ನಿ ತೋಟದತ್ತ ಹುಡುಕಿಕೊಂಡು ಹೋಗಿದ್ದು, ಪತಿಗೆ ಸಿಡಿಲು ಬಡಿದಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



