HomeIndia Newsಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 23 ವರ್ಷದ ಯೂಟ್ಯೂಬರ್ ಹಾಗೂ ತಾಯಿ ಸ್ಥಳದಲ್ಲೇ ಸಾವು!

ಮಧ್ಯಪ್ರದೇಶದಲ್ಲಿ ಭೀಕರ ಅಪಘಾತ: 23 ವರ್ಷದ ಯೂಟ್ಯೂಬರ್ ಹಾಗೂ ತಾಯಿ ಸ್ಥಳದಲ್ಲೇ ಸಾವು!

For Dai;y Updates Join Our whatsapp Group

ಮಧ್ಯಪ್ರದೇಶ: ಟ್ರಕ್‌ಗೆ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಉತ್ತರ ಪ್ರದೇಶದ 23 ವರ್ಷದ ಯೂಟ್ಯೂಬರ್ ಹಾಗೂ ಅವರ ತಾಯಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ.

ಉಜ್ಜಯಿನಿ-ಗರೋತ್ ಹೆದ್ದಾರಿಯ ರಾಮಖೇಡಿ ಗ್ರಾಮದ ಬಳಿ ಮಂಗಳವಾರ ಬೆಳಗ್ಗೆ ಸುಮಾರು 6 ಗಂಟೆಗೆ ಅಪಘಾತ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಎರ್ಟಿಗಾ ಕಾರು ಮುಂದೆ ಸಾಗುತ್ತಿದ್ದ ಟ್ರಕ್‌ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಅಪಘಾತದ ಬಳಿಕ ಟ್ರಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ.

ಮೃತರನ್ನು ಉತ್ತರ ಪ್ರದೇಶದ ನಿವಾಸಿಗಳಾದ 50 ವರ್ಷದ ಸಾರಿಕಾ ಹಾಗೂ ಅವರ 23 ವರ್ಷದ ಪುತ್ರಿ ಛವಿ ವರ್ಶ್ನಿ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಕಾರಿನ ಅವಶೇಷಗಳಲ್ಲಿ ಸಿಲುಕಿದ್ದವರನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ಬರೋಡ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಸಾರಿಕಾ ಹಾಗೂ ಛವಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಅಪಘಾತದಲ್ಲಿ ಛವಿ ಅವರ ತಂದೆ 54 ವರ್ಷದ ಶ್ಯಾಮಲಾಲ್, ಸಂಬಂಧಿ ಸೂರಜ್‌ಪಾಲ್ ಹಾಗೂ ಕಾರು ಚಾಲಕ ಸಚಿನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಮೂವರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟುಂಬವು ಸೋಮವಾರ ರಾತ್ರಿ ಉಜ್ಜಯಿನಿಗೆ ತೀರ್ಥಯಾತ್ರೆಗೆ ತೆರಳಿತ್ತು. ಈ ವೇಳೆ ಮಾರ್ಗಮಧ್ಯೆ ಅಪಘಾತ ಸಂಭವಿಸಿದೆ.

ಅಪಘಾತದಲ್ಲಿ ಮೃತಪಟ್ಟ ಛವಿ ವರ್ಶ್ನಿ ಜನಪ್ರಿಯ ಯೂಟ್ಯೂಬರ್ ಆಗಿದ್ದರು. ಅವರ ಯೂಟ್ಯೂಬ್ ಚಾನೆಲ್‌ಗೆ 7 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದು, ಇನ್‌ಸ್ಟಾಗ್ರಾಂನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದರು.

ಛವಿ ಅವರು 2021ರಲ್ಲಿ ಯೂಟ್ಯೂಬ್ ಚಾನೆಲ್ ಆರಂಭಿಸಿದ್ದರು. ಆರಂಭದಲ್ಲಿ ದೈನಂದಿನ ಜೀವನಕ್ಕೆ ಸಂಬಂಧಿಸಿದ ವ್ಲಾಗ್‌ಗಳನ್ನು ಪ್ರಕಟಿಸುತ್ತಿದ್ದ ಅವರು, ಬಳಿಕ ಆನ್‌ಲೈನ್ ಗೇಮಿಂಗ್‌ಗೆ ಸಂಬಂಧಿಸಿದ ವಿಡಿಯೋಗಳನ್ನೂ ಮಾಡುತ್ತಿದ್ದರು.

ಪದವಿ ಶಿಕ್ಷಣ ಪೂರ್ಣಗೊಳಿಸಿದ್ದ ಛವಿ ವಿದ್ಯಾಭ್ಯಾಸದಲ್ಲೂ ಉತ್ತಮ ಸಾಧನೆ ಮಾಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿಭಿನ್ನವಾಗಿ ಏನಾದರೂ ಸಾಧಿಸಬೇಕೆಂಬ ಆಸಕ್ತಿ ಹೊಂದಿದ್ದ ಅವರಿಗೆ ಕುಟುಂಬದವರು ಸಾಮಾಜಿಕ ಜಾಲತಾಣದ ವೃತ್ತಿಜೀವನಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು ಎನ್ನಲಾಗಿದೆ.

ಈ ಕುರಿತು ಬರೋಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕಾರು ಟ್ರಕ್‌ಗೆ ಡಿಕ್ಕಿ ಹೊಡೆಯಲು ವೇಗ, ಚಾಲಕರ ನಿರ್ಲಕ್ಷ್ಯ ಸೇರಿದಂತೆ ಇತರ ಕಾರಣಗಳಿದ್ದವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img