ಬೆಂಗಳೂರು: ಬೆಂಗಳೂರಿನಲ್ಲಿ ಮಗಳ ಚಿಕಿತ್ಸೆಗೆ ಹಣ ಹೊಂದಿಸಲು ಸಾಧ್ಯವಾಗದೇ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಕುಸುಮಾ ಎಂಬ ಮಹಿಳೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದು, ಎಸ್ಟರ್ ಆಸ್ಪತ್ರೆನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ದಿನಗಳ ಚಿಕಿತ್ಸೆಗೆ ಸುಮಾರು ಐದೂವರೆ ಲಕ್ಷ ರೂಪಾಯಿ ವೆಚ್ಚವಾಗಿದ್ದು, ಹಣದ ಅಭಾವದಿಂದ ಸಂಕಷ್ಟದಲ್ಲಿದ್ದ ತಂದೆ ಕಿಡ್ನಿ ಮಾರಾಟಕ್ಕೆ ಮುಂದಾಗಿದ್ದರು
ಈ ವಿಷಯ ತಿಳಿದ ತಕ್ಷಣ ಶಾಸಕ ಸುರೇಶ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿದರು. ಬಳಿಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರ ಗಮನಕ್ಕೆ ವಿಷಯ ತಂದರು.
ಪರಿಣಾಮವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಳ್ಳಲಾಯಿತು. ಜೊತೆಗೆ ಆಸ್ಪತ್ರೆ ಆಡಳಿತ ಮಂಡಳಿಯೂ ಮಾನವೀಯತೆ ತೋರಿಸಿ, ಕುಸುಮಾ ಅವರಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ರೋಗಿಯ ಆರೋಗ್ಯವನ್ನು ಶೀಘ್ರದಲ್ಲೇ ಸುಧಾರಿಸುವುದಾಗಿ ವೈದ್ಯರು ಭರವಸೆ ನೀಡಿದ್ದು, ಈ ನೆರವಿಗೆ ಶಾಸಕ ಸುರೇಶ್ ಕುಮಾರ್ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.



