ವಿಜಯನಗರ:- ಹರಪನಹಳ್ಳಿ ಪಟ್ಟಣದಲ್ಲಿ ಕಳೆದ ಕೆಲ ದಿನಗಳಿಂದ ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಟ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ರಾತ್ರಿ ವೇಳೆ ಮುಖ ಮುಚ್ಚಿಕೊಂಡು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಮೂವರು ಶಂಕಿತ ವ್ಯಕ್ತಿಗಳು ನಿರ್ಭಯವಾಗಿ ಓಡಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮತ್ತೊಬ್ಬ ಮುಸುಕುಧಾರಿ ಬೊಗಳುತ್ತಿರುವ ನಾಯಿಗಳನ್ನು ಕಲ್ಲಿನಿಂದ ಹೊಡೆದು ಓಡಿಸಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆ ಬಳಿಕ ರಾತ್ರಿ ವೇಳೆ ನಾಯಿಗಳ ಬೊಗಳುವ ಶಬ್ದ ಕೇಳಿ ಎಚ್ಚರಗೊಂಡ ನಿವಾಸಿಗಳು ತಮ್ಮ ಮನೆಗಳ ಸಿಸಿಟಿವಿ ಪರಿಶೀಲಿಸಿದಾಗ ಕಳ್ಳರ ಓಡಾಟ ಬೆಳಕಿಗೆ ಬಂದಿದೆ. ಈ ಘಟನೆ ಬೆನ್ನಲ್ಲೇ ಪಟ್ಟಣದಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ರಾತ್ರಿ ವೇಳೆ ಗಸ್ತು ಹೆಚ್ಚಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಘಟನೆ ಬಗ್ಗೆ ಬೇಸರ ಹೊರ ಹಾಕಿರುವ ಸ್ಥಳೀಯರು, ನಮ್ಮ ರಕ್ಷಣೆ ನಾವೇ ಮಾಡ್ಕೋಬೇಕು. ಮುಸುಕುಧಾರಿ ಕಳ್ಳರು ಬಂದಾಗ ಕಾರದಪುಡಿ ಎರಚಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಪಟ್ಟಣದಲ್ಲಿ ಸಾರ್ವಜನಿಕರ ಸಭೆ ನಡೆಸಿ ಜಾಗೃತಿ ಮಾಡಿಸುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾತ್ರಿ ಗಸ್ತು ಹೆಚ್ಚಿಸುವ ಭರವಸೆಯನ್ನು ಸಾರ್ವಜನಿಕರಿಗೆ ಪೊಲೀಸರು ನೀಡಿದ್ದಾರೆ.



