ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಪರಿಣಾಮಕಾರಿ ಪರಿಹಾರವಾಗಿ ಪರಿಗಣಿಸಲಾಗುತ್ತಿರುವ ನಮ್ಮ ಮೆಟ್ರೋದ ಹಳದಿ ಮಾರ್ಗ (ಆರ್.ವಿ. ರಸ್ತೆ–ಬೊಮ್ಮಸಂದ್ರ)ಕ್ಕೆ ಮತ್ತೊಂದು ಹೊಸ ರೈಲು ಸೇರ್ಪಡೆಯಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸೋಮವಾರ 13ನೇ ಮೆಟ್ರೋ ರೈಲನ್ನು ಸ್ವಾಗತಿಸಿದ್ದು, ಹಳದಿ ಮಾರ್ಗದ ಕಾರ್ಯಾಚರಣಾ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.
ಆರು ಕೋಚ್‌ಗಳನ್ನು ಒಳಗೊಂಡಿರುವ ಈ ಹೊಸ ರೈಲು ಸೋಮವಾರ ಹೆಬ್ಬಗೋಡಿ ಡಿಪೋಗೆ ತಲುಪಿದೆ. ಸದ್ಯ ಕೋಚ್‌ಗಳನ್ನು ಟ್ರೈಲರ್‌ಗಳಿಂದ ಇಳಿಸುವ ಕಾರ್ಯ ನಡೆಯುತ್ತಿದ್ದು, ನಂತರ ಅವುಗಳನ್ನು ಜೋಡಿಸಿ ಸ್ಟ್ಯಾಟಿಕ್ ಟೆಸ್ಟಿಂಗ್‌ಗಾಗಿ ಇನ್ಸ್‌ಪೆಕ್ಷನ್ ಬೇ ಲೈನ್ (IBL)ಗೆ ಕರೆದೊಯ್ಯಲಾಗುತ್ತದೆ.
ಸಾರ್ವಜನಿಕ ಸೇವೆಗೆ ಮುನ್ನ ರೈಲು ಕಡ್ಡಾಯವಾಗಿ ವಿವಿಧ ತಾಂತ್ರಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಿದ್ದು, ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿಲೋಮೀಟರ್‌ಗಳ ಪರೀಕ್ಷಾರ್ಥ ಸಂಚಾರ ನಡೆಸಲಾಗುತ್ತದೆ. ಮೆಟ್ರೋ ಸೇವೆಗೆ ಅಡಚಣೆ ಉಂಟಾಗದಂತೆ ಈ ಪರೀಕ್ಷಾ ಕಾರ್ಯಗಳನ್ನು ರಾತ್ರಿ ವೇಳೆಯಲ್ಲೇ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಳದಿ ಮಾರ್ಗದ ಮೊದಲ ವಾರ್ಷಿಕೋತ್ಸವ ಆಗಸ್ಟ್ 11ರಂದು ಪೂರ್ಣಗೊಳ್ಳಲಿದ್ದು, ಆ ವೇಳೆಗೆ ಒಟ್ಟು 15 ರೈಲುಗಳು ಕಾರ್ಯಾಚರಣೆಗೆ ಸಜ್ಜಾಗಲಿವೆ. ಇದರಿಂದ ಪ್ರಯಾಣಿಕರ ನಿರೀಕ್ಷೆಯ ಅವಧಿ ಗಣನೀಯವಾಗಿ ಕಡಿಮೆಯಾಗಲಿದ್ದು, ಪೀಕ್ ಅವರ್‌ನಲ್ಲಿ ಪ್ರತಿ 5 ನಿಮಿಷಕ್ಕೊಮ್ಮೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ರೈಲು ಸಂಚಾರ ನಡೆಸುವ ಗುರಿ ಹೊಂದಲಾಗಿದೆ.
ಇದಲ್ಲದೆ, ಒಟ್ಟು ರೈಲುಗಳಲ್ಲಿ ಎರಡು ರೈಲುಗಳನ್ನು ತುರ್ತು ಪರಿಸ್ಥಿತಿಗಳ ನಿರ್ವಹಣೆಗೆ ಮೀಸಲು ಸಂಗ್ರಹವಾಗಿ ಕಾಯ್ದಿರಿಸಲಾಗುತ್ತದೆ. ಹಳದಿ ಮಾರ್ಗದ ಅಗತ್ಯ ಪೂರೈಸಿದ ಬಳಿಕ ಟಿಆರ್‌ಎಸ್‌ಎಲ್ ಸಂಸ್ಥೆ ಪರ್ಪಲ್ ಹಾಗೂ ಗ್ರೀನ್ ಮಾರ್ಗಗಳಿಗಾಗಿ 18 ಹೊಸ ರೈಲುಗಳ ಪೂರೈಕೆಗೆ ಗಮನಹರಿಸಲಿದೆ.
ಇದೇ ವೇಳೆ, 2027ರೊಳಗೆ ಬೆಮೆಲ್ ಸಂಸ್ಥೆಯು ಹಳದಿ ಮಾರ್ಗಕ್ಕಾಗಿ ಹೆಚ್ಚುವರಿಯಾಗಿ ಆರು ರೈಲುಗಳನ್ನು ಪೂರೈಸುವ ನಿರೀಕ್ಷೆಯಿದ್ದು, ಭವಿಷ್ಯದಲ್ಲಿ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಮೆಟ್ರೋ ಸೇವೆಯನ್ನು ಮತ್ತಷ್ಟು ಬಲಪಡಿಸುವ ಯೋಜನೆ ರೂಪಿಸಲಾಗಿದೆ.



