ರಾಮನಗರ: ಬಡ ರೋಗಿಗಳಿಗೆ ಉಚಿತವಾಗಿ ತಲುಪಬೇಕಿದ್ದ ಸರ್ಕಾರಿ ಔಷಧಗಳೇ ಇದೀಗ ಕಾಡು ಸೇರಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಅಜ್ಜನಹಳ್ಳಿ ಹಾಗೂ ಶಂಭುದೇವನಹಳ್ಳಿ ಗ್ರಾಮಗಳ ನಡುವಿನ ಅರಣ್ಯ ಪ್ರದೇಶದ ರಸ್ತೆ ಬದಿ ಮತ್ತು ಬಂಡೆಗಳ ಮೇಲೆ ಅಪಾರ ಪ್ರಮಾಣದ ಸರ್ಕಾರಿ ಔಷಧಗಳನ್ನು ಸುರಿದು ಹೋಗಲಾಗಿದೆ.
ದೊಡ್ಡ ಚೀಲಗಳಲ್ಲಿ ಔಷಧಗಳನ್ನು ತಂದು ಅರಣ್ಯ ಪ್ರದೇಶದಲ್ಲಿ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ವಿತರಿಸುವ ಮಾತ್ರೆಗಳು, ಗ್ಲೂಕೋಸ್ ಬಾಟಲಿಗಳು ಸೇರಿದಂತೆ ವಿವಿಧ ಔಷಧಗಳು ಪತ್ತೆಯಾಗಿವೆ.
‘ಕರ್ನಾಟಕ ಸರ್ಕಾರ, ಆರೋಗ್ಯ ಇಲಾಖೆ – ಉಚಿತ ಪೂರೈಕೆ, ಮಾರಾಟಕ್ಕಲ್ಲ’ ಎಂಬ ಗುರುತು ಹೊಂದಿರುವ ಔಷಧಗಳೇ ಕಾಡಿನಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಅಚ್ಚರಿಯ ಸಂಗತಿಯೆಂದರೆ, ಪತ್ತೆಯಾದ ಔಷಧಗಳಲ್ಲಿ ಕೆಲವು ಅವಧಿ ಮೀರಿದ್ದರೆ, ಇನ್ನೂ ಹಲವು ಔಷಧಗಳು ಬಳಕೆಗೆ ಯೋಗ್ಯವಾಗಿರುವ ದಿನಾಂಕವನ್ನು ಹೊಂದಿವೆ ಎನ್ನಲಾಗಿದೆ. ಮಧುಮೇಹ, ರಕ್ತದೊತ್ತಡ, ಜ್ವರ ಹಾಗೂ ಇತರೆ ಸಾಮಾನ್ಯ ಕಾಯಿಲೆಗಳಿಗೆ ಬಳಸುವ ಮಾತ್ರೆಗಳು ಕೂಡ ಪತ್ತೆಯಾಗಿವೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳು ಔಷಧಕ್ಕಾಗಿ ಪರದಾಡುತ್ತಿರುವ ಸಂದರ್ಭದಲ್ಲಿ, ಸರ್ಕಾರದ ಉಚಿತ ಔಷಧಗಳನ್ನು ಈ ರೀತಿ ಕಾಡಿನಲ್ಲಿ ಬಿಸಾಡಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಔಷಧಗಳ ವಿಲೇವಾರಿಗೆ ನಿಗದಿತ ನಿಯಮಗಳಿದ್ದರೂ ಅವುಗಳನ್ನು ಪಾಲಿಸದೆ ಅರಣ್ಯ ಪ್ರದೇಶದಲ್ಲಿ ಎಸೆದಿರುವುದು ಪರಿಸರದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಘಟನೆಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ತನಿಖೆ ನಡೆಸಿ, ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.



