ಚೆನ್ನೈ: ಸಿನಿಮಾ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ತಮಿಳುನಾಡಿನ ದೇವಾಲಯಗಳ ಧರ್ಮದರ್ಶಿಗಳ ಆಯ್ಕೆ ಸಮಿತಿಗೆ ನೇಮಕ ಮಾಡಿರುವುದು ರಾಜ್ಯ ರಾಜಕೀಯ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. 10 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳಿಗೆ ಧರ್ಮದರ್ಶಿಗಳನ್ನು ಆಯ್ಕೆ ಮಾಡುವ ಮಹತ್ವದ ಜವಾಬ್ದಾರಿ ಹೊಂದಿರುವ ಸಮಿತಿಗೆ ಚಿತ್ರರಂಗದ ವ್ಯಕ್ತಿಯನ್ನು ನೇಮಕ ಮಾಡಿರುವುದನ್ನು ಕೆಲವರು ಪ್ರಶ್ನಿಸಿದರೆ, ಮತ್ತೊಂದೆಡೆ ವಿಜಯ್ ಅಭಿಮಾನಿಗಳು ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಎಜಿಎಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ನಿರ್ಮಾಪಕಿ ಅರ್ಚನಾ ಕಲ್ಪತಿ ಅವರನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ ದೇಣಿಗೆ ಇಲಾಖೆಗೆ ಸಂಬಂಧಿಸಿದ ಸಮಿತಿಗೆ ನೇಮಕ ಮಾಡಲಾಗಿದೆ. ಎರಡು ವರ್ಷಗಳ ಅವಧಿಗೆ ಕಾರ್ಯನಿರ್ವಹಿಸಲಿರುವ ಸಮಿತಿಯಲ್ಲಿ ಹಿರಿಯ ನ್ಯಾಯಾಧೀಶರು ಮತ್ತು ನಿವೃತ್ತ ಐಎಎಸ್ ಅಧಿಕಾರಿಗಳೂ ಇದ್ದಾರೆ.
ನೇಮಕಾತಿ ವಿಚಾರ ಹೊರಬರುತ್ತಿದ್ದಂತೆ ನೆಟ್ಟಿಗರಿಂದ ಹಲವು ಪ್ರಶ್ನೆಗಳು ಎದುರಾಗಿವೆ. ದೇವಾಲಯಗಳ ಧರ್ಮದರ್ಶಿಗಳ ಆಯ್ಕೆಯಂತಹ ಜವಾಬ್ದಾರಿಯುತ ಸಮಿತಿಗೆ ಸಿನಿಮಾ ಕ್ಷೇತ್ರದ ವ್ಯಕ್ತಿಯನ್ನು ಆಯ್ಕೆ ಮಾಡಿರುವುದರ ಹಿಂದಿನ ಮಾನದಂಡವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ.
ಇನ್ನೂ ಕೆಲವರು ತಮಿಳುನಾಡು ಸರ್ಕಾರವನ್ನು ಕಾಲಿವುಡ್ನ ಮನರಂಜನಾ ಕ್ಲಬ್ಗೆ ಹೋಲಿಸಿ ವ್ಯಂಗ್ಯವಾಡಿದ್ದಾರೆ. ನಟ ಹಾಗೂ ಮುಖ್ಯಮಂತ್ರಿ ವಿಜಯ್ ಅವರ ಅಭಿಮಾನಿಗಳು ಸರ್ಕಾರದ ಪ್ರತಿಯೊಂದು ನಿರ್ಧಾರವನ್ನೂ ಬೆಂಬಲಿಸುತ್ತಿದ್ದಾರೆ ಎಂಬ ಟೀಕೆಯೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿದೆ.
ಆದರೆ ವಿಜಯ್ ಅಭಿಮಾನಿಗಳ ವಾದವೇ ಬೇರೆ. ಅರ್ಚನಾ ಕಲ್ಪತಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದು, ಉದ್ಯಮ ಕ್ಷೇತ್ರದಲ್ಲೂ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರ ವೃತ್ತಿಪರ ಹಿನ್ನೆಲೆಯನ್ನು ಪರಿಗಣಿಸಿಯೇ ಸರ್ಕಾರ ನೇಮಕ ಮಾಡಿರಬಹುದು ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ವಿಜಯ್ ಅವರ ಮ್ಯಾನೇಜರ್ ಜಗದೀಶ್, ಛಾಯಾಗ್ರಾಹಕ ಮನೋಜ್ ಪರಮಹಂಸ ಮತ್ತು ನಿರ್ಮಾಪಕ ವೆಂಕಟ ನಾರಾಯಣ ಅವರಿಗೆ ಈ ಹಿಂದೆ ಸರ್ಕಾರಿ ಜವಾಬ್ದಾರಿಗಳು ನೀಡಲಾಗಿದ್ದವು ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.
ಒಟ್ಟಿನಲ್ಲಿ ಅರ್ಚನಾ ಕಲ್ಪತಿ ಅವರ ನೇಮಕಾತಿ ಕೇವಲ ಒಂದು ಸರ್ಕಾರಿ ನೇಮಕಾತಿಯಾಗಿ ಉಳಿಯದೆ, ತಮಿಳುನಾಡಿನಲ್ಲಿ ಸಿನಿಮಾ ಕ್ಷೇತ್ರ ಮತ್ತು ಸರ್ಕಾರದ ನಡುವಿನ ಸಂಬಂಧದ ಕುರಿತು ಹೊಸ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ವೇದಿಕೆಯಾಗಿದೆ.



