ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಎಪಿಎಂಸಿ ಯಾರ್ಡ್‌ನ ಸ್ವಾಮಿ ವಿವೇಕಾನಂದ ಸಭಾಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ನಡೆದ ‘ಗದಗ ಉತ್ಸವ–೨೦೨೬’ ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಯಶಸ್ವಿಯಾಗಿ ಸಂಪನ್ನಗೊಂಡಿತು.
ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಗ್ರಾಮೀಣ ಹಾಗೂ ಸಣ್ಣ ಉದ್ಯಮ ವಿಭಾಗ ಮತ್ತು ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಆಯೋಜಿಸಿದ್ದ ಉತ್ಸವಕ್ಕೆ ಭವ್ಯ ವೇದಿಕೆ, ಆಕರ್ಷಕ ದೀಪಾಲಂಕಾರ, ಅಚ್ಚುಕಟ್ಟಾದ ಪೀಠೋಪಕರಣ ವ್ಯವಸ್ಥೆ ಹಾಗೂ ಅತ್ಯಾಧುನಿಕ ಧ್ವನಿವರ್ಧಕ ವ್ಯವಸ್ಥೆಗಳು ವಿಶೇಷ ಮೆರುಗು ನೀಡಿದವು.
ಉತ್ಸವದ ಯಶಸ್ಸಿನ ಹಿಂದೆ ತಮ್ಮ ಸೃಜನಶೀಲತೆ ಹಾಗೂ ಪರಿಶ್ರಮದ ಮೂಲಕ ಪ್ರಮುಖ ಪಾತ್ರ ವಹಿಸಿದ ‘ಅಪ್ಪುರಾಜ್ ಇವೆಂಟ್ಸ್’ನ ಯುವ ಉದ್ಯಮಿ ಅಪ್ಪುರಾಜ್ ಭದ್ರಕಾಳಮ್ಮನಮಠ ಅವರನ್ನು ಗದಗ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಮ್ಮ ಉತ್ಸಾಹಿ ಕಲಾ ತಂಡದೊಂದಿಗೆ ಉತ್ಸವದ ವೇದಿಕೆ ಸಜ್ಜುಗೊಳಿಸುವಿಕೆ, ಅಲಂಕಾರ ಹಾಗೂ ವಿವಿಧ ವ್ಯವಸ್ಥೆಗಳಿಗೆ ನೀಡಿದ ಸೇವೆಯನ್ನು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಹಾಗೂ ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಪುಣೇಕರ ಶ್ಲಾಘಿಸಿ, ಅಪ್ಪುರಾಜ್ ಅವರನ್ನು ಅಭಿನಂದಿಸಿದರು.
ಯುವ ಉದ್ಯಮಿ ಅಪ್ಪುರಾಜ್ ಅವರ ಸೃಜನಶೀಲತೆ, ಸಂಘಟನಾ ಸಾಮರ್ಥ್ಯ ಹಾಗೂ ಅವರ ಕಲಾತಂಡದ ಪರಿಶ್ರಮಕ್ಕೆ ದೊರೆತ ಈ ಗೌರವವು ಗದಗ ಉತ್ಸವದ ಯಶಸ್ಸಿನ ಮತ್ತೊಂದು ಹೆಮ್ಮೆಯ ಕ್ಷಣವಾಗಿ ಮೂಡಿಬಂದಿತು ಎಂದು ಆಯೋಜಕರು ತಿಳಿಸಿದ್ದಾರೆ.



