ವಿಜಯಸಾಕ್ಷಿ ಸುದ್ದಿ, ರೋಣ: ತಾಲೂಕಿನ ಮಾರನಬಸರಿ ಗ್ರಾಮದಿಂದ ಕೊಪ್ಪದ ಕ್ರಾಸ್‌ವರೆಗೆ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಗುಲ್ಮೋಹರ್ ಮರಗಳು ಇದೀಗ ಸಂಚಾರಿಗಳ ಕಣ್ಮನ ಸೆಳೆಯುತ್ತಿವೆ. ಕೆಂಪು-ಕಿತ್ತಳೆ ಬಣ್ಣದ ಹೂವುಗಳಿಂದ ಕಂಗೊಳಿಸುತ್ತಿರುವ ಈ ಮರಗಳು ರಸ್ತೆಯನ್ನೇ ನೈಸರ್ಗಿಕ ಹೂವಿನ ಸುರಂಗವನ್ನಾಗಿ ಮಾರ್ಪಡಿಸಿವೆ.
ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ದಟ್ಟವಾಗಿ ಬೆಳೆದಿರುವ ಮರಗಳು ಪ್ರಯಾಣಿಕರಿಗೆ ತಂಪಾದ ನೆರಳನ್ನು ನೀಡುತ್ತಿದ್ದು, ಬೇಸಿಗೆಯ ಬಿಸಿಲಿನ ಮಧ್ಯೆಯೂ ಮನಸಿಗೆ ಹಿತ ನೀಡುವ ವಾತಾವರಣ ಸೃಷ್ಟಿಸಿವೆ.
ಹೂವುಗಳಿಂದ ಆವೃತವಾಗಿರುವ ರಸ್ತೆಯಲ್ಲಿ ಯುವಕರು, ಪ್ರವಾಸಿಗರು ಹಾಗೂ ಸ್ಥಳೀಯರು ನಿಂತು ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯ ದೃಶ್ಯವಾಗಿದೆ. ರಸ್ತೆಯ ಮೇಲೆ ಉದುರಿರುವ ಗುಲ್ಮೋಹರ್ ಹೂವುಗಳು ಪ್ರಕೃತಿಯ ರಂಗೋಲಿಯಂತೆಯೇ ಕಂಗೊಳಿಸುತ್ತಿದ್ದು, ಈ ಮಾರ್ಗವನ್ನು ಮತ್ತಷ್ಟು ಆಕರ್ಷಕವಾಗಿಸಿವೆ.
ಪ್ರಕೃತಿ ಪ್ರೇಮಿಗಳು ಹಾಗೂ ವಾಹನ ಸವಾರರು ಈ ರಸ್ತೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಈ ದೃಶ್ಯಗಳು ವೈರಲ್ ಆಗುತ್ತಿವೆ.



