HomeKarnataka Newsಹೈದರ್ ಅಲಿ ಕೊಲೆ ಕೇಸ್: ಗನ್‌ಮ್ಯಾನ್ ಕೋರಿ ಕೋರ್ಟ್ ಮೆಟ್ಟಿಲೇರಿದ ಆರೋಪಿ ಅಬ್ಬಾಸ್!

ಹೈದರ್ ಅಲಿ ಕೊಲೆ ಕೇಸ್: ಗನ್‌ಮ್ಯಾನ್ ಕೋರಿ ಕೋರ್ಟ್ ಮೆಟ್ಟಿಲೇರಿದ ಆರೋಪಿ ಅಬ್ಬಾಸ್!

For Dai;y Updates Join Our whatsapp Group

ಬೆಂಗಳೂರು: ಹೈದರ್ ಅಲಿ ಕೊಲೆ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ಮುಖಂಡ ಅಬ್ಬಾಸ್, ತನಗೆ ಜೀವಭಯವಿದೆ ಎಂದು ಹೇಳಿ ಪೊಲೀಸ್ ಗನ್‌ಮ್ಯಾನ್ ಭದ್ರತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಕೊಲೆ ಹಾಗೂ ಕೋಕಾ ಕಾಯ್ದೆಯಡಿ ಪ್ರಕರಣ ಎದುರಿಸುತ್ತಿರುವ ಆರೋಪಿಯೇ ಪೊಲೀಸ್ ಭದ್ರತೆ ಕೇಳಿರುವುದು ಇದೀಗ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಅಬ್ಬಾಸ್ ಈಗಾಗಲೇ ಖಾಸಗಿ ಗನ್‌ಮ್ಯಾನ್‌ಗಳ ಭದ್ರತೆ ಹೊಂದಿದ್ದಾರೆ ಎನ್ನಲಾಗಿದೆ. ಖಾಸಗಿ ಭದ್ರತೆ ಇದ್ದರೂ ಪೊಲೀಸ್ ಇಲಾಖೆಯಿಂದ ಗನ್‌ಮ್ಯಾನ್ ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.

2025ರ ಫೆಬ್ರವರಿ 23ರ ರಾತ್ರಿ ರೌಡಿಶೀಟರ್ ಹೈದರ್ ಅಲಿ ಕೊಲೆಯಾಗಿದ್ದರು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಶಿವಮೊಗ್ಗದ ನಯಾಜ್ ಅಲಿಯಾಸ್ ನಜ್ಜು ಪಾಷ ಹಾಗೂ ಆತನ ಸಹಚರರು ಹೈದರ್ ಅಲಿಯನ್ನು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಹೈದರ್ ಅಲಿ ಹತ್ಯೆಗೆ ಕಾಂಗ್ರೆಸ್ ಮುಖಂಡ ಅಬ್ಬಾಸ್ ಹಣಕಾಸಿನ ನೆರವು ನೀಡಿದ್ದರು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಒಂದೇ ಕ್ಷೇತ್ರದಲ್ಲಿ ಜಿಬಿಎ ಕಾಂಗ್ರೆಸ್ ಅಭ್ಯರ್ಥಿಯಾಗಲು ಹೈದರ್ ಅಲಿ ಮತ್ತು ಅಬ್ಬಾಸ್ ನಡುವೆ ಪೈಪೋಟಿ ಇತ್ತು ಎನ್ನಲಾಗಿದೆ. ಹೈದರ್ ಅಲಿ ಹತ್ಯೆಯಾದರೆ ತನ್ನ ರಾಜಕೀಯ ಹಾದಿ ಸುಲಭವಾಗಲಿದೆ ಎಂಬ ಕಾರಣಕ್ಕೆ ಕೊಲೆಗೆ ಹಣಕಾಸು ನೆರವು ನೀಡಲಾಗಿದೆ ಎಂಬ ಆರೋಪ ಅಬ್ಬಾಸ್ ವಿರುದ್ಧ ಇದೆ.

ಹೈದರ್ ಅಲಿ ಕುಟುಂಬಸ್ಥರು ಕೂಡ ಅಬ್ಬಾಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹೈದರ್ ಅಲಿ ಹತ್ಯೆಯ ಹಿಂದೆ ಅಬ್ಬಾಸ್ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ ಎನ್ನಲಾಗಿದೆ.

ಇಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅಬ್ಬಾಸ್ ಇದೀಗ ಪೊಲೀಸ್ ಗನ್‌ಮ್ಯಾನ್ ಭದ್ರತೆ ಕೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊಲೆ ಹಾಗೂ ಕೋಕಾ ಪ್ರಕರಣದ ಆರೋಪಿಗೆ ಪೊಲೀಸ್ ಗನ್‌ಮ್ಯಾನ್ ನೀಡಲು ಸಾಧ್ಯವೇ? ಅಬ್ಬಾಸ್ ಸಲ್ಲಿಸಿರುವ ಅರ್ಜಿಯ ಹಿಂದೆ ಕೆಲ ಪೊಲೀಸ್ ಅಧಿಕಾರಿಗಳ ಬೆಂಬಲ ಇದೆಯೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.

ಅಬ್ಬಾಸ್ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಒಂದು ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಚಿಕ್ಕಬಳ್ಳಾಪುರದ ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲೂ ಪ್ರಕರಣವಿದೆ ಎನ್ನಲಾಗಿದೆ. ಸದ್ಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಹೈದರ್ ಅಲಿ ಕೊಲೆ ಹಾಗೂ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇಷ್ಟೆಲ್ಲ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೂ ಪೊಲೀಸರು ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಅಬ್ಬಾಸ್ ಗನ್‌ಮ್ಯಾನ್ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದಾಗ, ಅವರ ವಿರುದ್ಧ ಇರುವ ಪ್ರಕರಣಗಳ ಸಂಪೂರ್ಣ ಮಾಹಿತಿಯನ್ನು ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದಾರೆಯೇ ಎಂಬ ಪ್ರಶ್ನೆಯೂ ಎದುರಾಗಿದೆ.

ಇನ್ನೊಂದೆಡೆ, ಹೈದರ್ ಅಲಿ ಕೊಲೆ ಹಾಗೂ ಕೋಕಾ ಪ್ರಕರಣದ ತನಿಖೆಯ ಭಾಗವಾಗಿ ಅಶೋಕನಗರ ಪೊಲೀಸರು ಅಬ್ಬಾಸ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದರು ಎನ್ನಲಾಗಿದೆ. ಅಬ್ಬಾಸ್ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದರು ಎಂದು ಹೇಳಲಾಗಿದೆ.

ಆದರೆ ಅಬ್ಬಾಸ್ ವಿರುದ್ಧ ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದಕ್ಕೆ ಓರ್ವ ಹಿರಿಯ ಪೊಲೀಸ್ ಅಧಿಕಾರಿ ಗರಂ ಆಗಿದ್ದರು ಎಂಬ ಆರೋಪ ಕೇಳಿಬಂದಿದೆ. “ನಿಮಗೆ ಯಾರು ಲುಕ್ ಔಟ್ ಸರ್ಕ್ಯುಲರ್ ಹಾಕಲು ಹೇಳಿದ್ದು?” ಎಂದು ಅಶೋಕನಗರ ಪೊಲೀಸರನ್ನು ಆ ಅಧಿಕಾರಿ ಪ್ರಶ್ನಿಸಿದ್ದರು ಎನ್ನಲಾಗಿದೆ.

ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಹಿರಿಯ ಅಧಿಕಾರಿ, ಲುಕ್ ಔಟ್ ಸರ್ಕ್ಯುಲರ್ ವಿಚಾರದಲ್ಲಿ ಏಕೆ ಮಧ್ಯಪ್ರವೇಶ ಮಾಡಿದರು ಎಂಬ ಪ್ರಶ್ನೆ ಇದೀಗ ಮೂಡಿದೆ. ಆರೋಪಿಯ ಪರವಾಗಿ ಆ ಹಿರಿಯ ಅಧಿಕಾರಿ ನಿಂತಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ.

ಕೊಲೆ ಮತ್ತು ಕೋಕಾ ಪ್ರಕರಣದ ಆರೋಪಿಗೆ ಪೊಲೀಸ್ ಗನ್‌ಮ್ಯಾನ್ ಭದ್ರತೆ ನೀಡಿದರೆ ಏನಾಗಬಹುದು? ಅಬ್ಬಾಸ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ಪೊಲೀಸರು ತಂದಿದ್ದಾರೆಯೇ? ಲುಕ್ ಔಟ್ ಸರ್ಕ್ಯುಲರ್ ಹೊರಡಿಸಿದ್ದಕ್ಕೆ ಹಿರಿಯ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದು ಏಕೆ?

ಈ ಎಲ್ಲ ಪ್ರಶ್ನೆಗಳಿಗೆ ಪೊಲೀಸ್ ಇಲಾಖೆಯಿಂದ ಸ್ಪಷ್ಟ ಉತ್ತರ ಸಿಗಬೇಕಿದೆ. ಹೈದರ್ ಅಲಿ ಕೊಲೆ ಪ್ರಕರಣದ ಆರೋಪಿಯ ಗನ್‌ಮ್ಯಾನ್ ಬೇಡಿಕೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ನಡೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img