HomeGadag Newsಜಿಲ್ಲಾ ಕ್ರೀಡಾಂಗಣ ಕಾಮಗಾರಿಗೆ ತಕ್ಷಣ ತಡೆ ನೀಡಿ: ಅನಿಲ ಮೆಣಸಿನಕಾಯಿ

ಜಿಲ್ಲಾ ಕ್ರೀಡಾಂಗಣ ಕಾಮಗಾರಿಗೆ ತಕ್ಷಣ ತಡೆ ನೀಡಿ: ಅನಿಲ ಮೆಣಸಿನಕಾಯಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಕ್ರೀಡಾಂಗಣದಲ್ಲಿ ಸಮಗ್ರ ತಾಂತ್ರಿಕ ಅಭಿಪ್ರಾಯ, ಸಾರ್ವಜನಿಕ ಸಮಾಲೋಚನೆ ಹಾಗೂ ವಿವಿಧ ಕ್ರೀಡಾ ಸಂಘಟನೆಗಳ ಒಪ್ಪಿಗೆ ಪಡೆಯದೆ ಫುಟ್‌ಬಾಲ್‌ಗೆ ಸಂಬಂಧಿಸಿದ ಟ್ರ್ಯಾಕ್ ವಿಶೇಷ ಕಾಮಗಾರಿ ಕೈಗೊಳ್ಳಲು ಮುಂದಾಗಿರುವುದು ಖಂಡನೀಯ. ಅವೈಜ್ಞಾನಿಕ ಕಾಮಗಾರಿಯಿಂದ ಕ್ರೀಡಾಂಗಣದ ಮೂಲಸ್ವರೂಪವೇ ಹಾಳಾಗುವ ಅಪಾಯವಿದೆ ಎಂದು ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲಾ ಕ್ರೀಡಾಂಗಣ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ. ಅದು ಜಿಲ್ಲೆಯ ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರ ಆಸ್ತಿಯಾಗಿದೆ. ಕ್ರಿಕೆಟ್, ಅಥ್ಲೆಟಿಕ್ಸ್, ಫುಟ್‌ಬಾಲ್ ಸೇರಿದಂತೆ ವಿವಿಧ ಕ್ರೀಡಾಕೂಟಗಳು, ಸರ್ಕಾರಿ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕ ಸಮಾರಂಭಗಳು ಇಲ್ಲಿ ನಡೆಯುತ್ತವೆ. ಪ್ರತಿದಿನ ನೂರಾರು ನಾಗರಿಕರು ಬೆಳಗಿನ ನಡಿಗೆ ಮತ್ತು ವ್ಯಾಯಾಮಕ್ಕಾಗಿ ಕ್ರೀಡಾಂಗಣ ಬಳಸುತ್ತಿದ್ದಾರೆ ಎಂದಿದ್ದಾರೆ.

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ, ಜನವರಿ 26ರ ಗಣರಾಜ್ಯೋತ್ಸವ, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ, ಶಾಲಾ-ಕಾಲೇಜುಗಳ ಕ್ರೀಡಾಕೂಟಗಳು, ಪೊಲೀಸ್ ಹಾಗೂ ಸರ್ಕಾರಿ ಇಲಾಖೆಗಳ ಪಥಸಂಚಲನ, ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಉದ್ದೇಶಿತ ಕಾಮಗಾರಿಯಿಂದ ತೊಂದರೆಯಾಗುವ ಸಾಧ್ಯತೆಯಿದೆ. ಒಂದು ನಿರ್ದಿಷ್ಟ ಫುಟ್‌ಬಾಲ್ ಕಾರ್ಯಕ್ರಮಕ್ಕಾಗಿ ಇಡೀ ಜಿಲ್ಲಾ ಕ್ರೀಡಾಂಗಣದ ಬಹುಉಪಯೋಗಿ ಸ್ವರೂಪವನ್ನು ನಾಶಪಡಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಇದೇ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಕ್ರಿಕೆಟ್ ಕಾರ್ಯಕ್ರಮ ಆಯೋಜಿಸಿದ್ದೆವು. ಅದಕ್ಕೆ ಪ್ರತಿಯಾಗಿ ರಾಜಕೀಯ ಪ್ರತಿಷ್ಠೆ ಹಾಗೂ ಪೈಪೋಟಿಯ ಕಾರಣದಿಂದ ಶಾಸಕರು ಮತ್ತು ಅವರ ಪುತ್ರರ ಪ್ರಭಾವದಲ್ಲಿ ಫುಟ್‌ಬಾಲ್ ಕಾರ್ಯಕ್ರಮಕ್ಕಾಗಿ ಕಾಮಗಾರಿ ರೂಪಿಸಲಾಗಿದೆ ಎಂಬ ಗಂಭೀರ ಅನುಮಾನ ಸಾರ್ವಜನಿಕ ವಲಯದಲ್ಲಿದೆ. ಇದರ ಸತ್ಯಾಸತ್ಯತೆಯನ್ನು ಸ್ವತಂತ್ರ ತನಿಖೆಯಿಂದ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಫುಟ್‌ಬಾಲ್ ಆಟಗಾರರ ವಿರುದ್ಧ ಯಾವುದೇ ವಿರೋಧವಿಲ್ಲ. ಅವರಿಗೆ ಪ್ರತ್ಯೇಕ, ವೈಜ್ಞಾನಿಕ ಹಾಗೂ ಸುಸಜ್ಜಿತ ಫುಟ್‌ಬಾಲ್ ಕ್ರೀಡಾಂಗಣ ಕಲ್ಪಿಸಬೇಕು. ಆದರೆ ಒಂದು ಕ್ರೀಡೆಗಾಗಿ ಜಿಲ್ಲಾ ಕ್ರೀಡಾಂಗಣದ ಇತರ ಚಟುವಟಿಕೆಗಳನ್ನು ಬಲಿಕೊಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಮಗಾರಿ ಆರಂಭಿಸುವ ಮುನ್ನ ಮಣ್ಣು, ನೀರು ಹರಿವು ಹಾಗೂ ಕ್ರೀಡಾಂಗಣದ ಸಾಮರ್ಥ್ಯದ ವೈಜ್ಞಾನಿಕ ಪರೀಕ್ಷೆ ನಡೆಸಲಾಗಿದೆಯೇ? ಅರ್ಹ ಕ್ರೀಡಾಂಗಣ ತಜ್ಞರು ಹಾಗೂ ಸಿವಿಲ್ ಎಂಜಿನಿಯರ್‌ಗಳಿಂದ ತಾಂತ್ರಿಕ ವರದಿ ಪಡೆಯಲಾಗಿದೆಯೇ? ಕ್ರಿಕೆಟ್, ಅಥ್ಲೆಟಿಕ್ಸ್ ಸೇರಿದಂತೆ ಎಲ್ಲ ಕ್ರೀಡಾ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿದೆಯೇ? ಬೆಳಗಿನ ನಡಿಗೆ ಮಾಡುವ ನಾಗರಿಕರು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ? ಕಾಮಗಾರಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಅನುಮೋದನೆ ನೀಡಿದವರು ಯಾರು? ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆಯೇ? ಅಂದಾಜು ಮೊತ್ತ, ಗುತ್ತಿಗೆದಾರರ ಹೆಸರು ಹಾಗೂ ಹಣದ ಮೂಲವನ್ನು ಸಾರ್ವಜನಿಕಗೊಳಿಸಲಾಗಿದೆಯೇ? ರಾಷ್ಟ್ರೀಯ ದಿನಾಚರಣೆಗಳ ಸರ್ಕಾರಿ ಕಾರ್ಯಕ್ರಮಗಳಿಗೆ ತೊಂದರೆಯಾಗುವುದಿಲ್ಲ ಎಂಬ ಲಿಖಿತ ಪ್ರಮಾಣಪತ್ರವಿದೆಯೇ ಎಂಬ ಪ್ರಶ್ನೆಗಳಿಗೆ ಜಿಲ್ಲಾಡಳಿತ ತಕ್ಷಣ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಮರ್ಪಕ ತಾಂತ್ರಿಕ ಅಭಿಪ್ರಾಯವಿಲ್ಲದೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಕಡೆಗಣಿಸಿ ಆತುರದಲ್ಲಿ ಕಾಮಗಾರಿ ನಡೆಸುತ್ತಿರುವುದನ್ನು ಗಮನಿಸಿದರೆ ಭಾರೀ ಹಣಕಾಸು ಅವ್ಯವಹಾರ ಮತ್ತು ಭ್ರಷ್ಟಾಚಾರದ ಸಾಧ್ಯತೆ ಕುರಿತು ಅನುಮಾನ ಮೂಡುತ್ತದೆ. ಆದ್ದರಿಂದ ಕರ್ನಾಟಕ ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ಪ್ರಕರಣ ಪರಿಗಣಿಸಿ ಯೋಜನೆಯ ಅನುಮೋದನೆ, ಅಂದಾಜು ವೆಚ್ಚ, ಟೆಂಡರ್, ಗುತ್ತಿಗೆ, ಹಣ ಬಿಡುಗಡೆ ಹಾಗೂ ರಾಜಕೀಯ ಪ್ರಭಾವದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಡಳಿತವು ಆಕ್ಷೇಪಗಳನ್ನು ನಿರ್ಲಕ್ಷಿಸಿ ಕಾಮಗಾರಿ ಮುಂದುವರಿಸಿದರೆ ಸಾರ್ವಜನಿಕ ಆಸ್ತಿಯ ರಕ್ಷಣೆಗೆ ಕಾನೂನು ಹೋರಾಟ, ಶಾಂತಿಯುತ ಪ್ರತಿಭಟನೆ, ಜನಜಾಗೃತಿ ಅಭಿಯಾನ ಹಾಗೂ ಸಂಬಂಧಪಟ್ಟ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸುವುದು ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲ ಮಾರ್ಗಗಳಲ್ಲಿ ಹೋರಾಟ ನಡೆಸಲು ಸಿದ್ಧರಾಗಿರುವುದಾಗಿ ಅವರು ತಿಳಿಸಿದ್ದಾರೆ.

ಫುಟ್‌ಬಾಲ್ ಆಟಗಾರರ ವಿರುದ್ಧ ನಮ್ಮ ವಿರೋಧವಿಲ್ಲ. ಆದರೆ ಒಂದು ಕ್ರೀಡೆಗಾಗಿ ಜಿಲ್ಲೆಯ ಎಲ್ಲ ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಬಳಸುವ ಬಹುಉಪಯೋಗಿ ಕ್ರೀಡಾಂಗಣದ ಸ್ವರೂಪ ಹಾಳುಮಾಡುವುದನ್ನು ಒಪ್ಪುವುದಿಲ್ಲ. ಲೋಕಾಯುಕ್ತರು ಸ್ವಯಂಪ್ರೇರಿತವಾಗಿ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು.

ಅನಿಲ ಮೆಣಸಿನಕಾಯಿ

  • ಪ್ರಮುಖ ಬೇಡಿಕೆಗಳು
  • ಉದ್ದೇಶಿತ ಕಾಮಗಾರಿಯನ್ನು ತಕ್ಷಣ ಸ್ಥಗಿತಗೊಳಿಸಬೇಕು.
  • ತನಿಖೆ ಪೂರ್ಣಗೊಳ್ಳುವವರೆಗೆ ಯಾವುದೇ ಕಾಮಗಾರಿಗೆ ಅವಕಾಶ ನೀಡಬಾರದು.
  • ಯೋಜನಾ ವರದಿ, ನಕ್ಷೆ, ಅಂದಾಜು ವೆಚ್ಚ ಹಾಗೂ ಟೆಂಡರ್ ದಾಖಲೆಗಳನ್ನು ಸಾರ್ವಜನಿಕಗೊಳಿಸಬೇಕು.
  • ಕ್ರೀಡಾ ತಜ್ಞರು, ಎಂಜಿನಿಯರ್‌ಗಳು ಹಾಗೂ ಎಲ್ಲ ಕ್ರೀಡಾ ಸಂಘಟನೆಗಳೊಂದಿಗೆ ಬಹಿರಂಗ ಸಭೆ ನಡೆಸಬೇಕು.
  • ಕ್ರೀಡಾಂಗಣಕ್ಕೆ ಹಾನಿಯಾಗುವುದಿಲ್ಲ ಎಂಬುದನ್ನು ಸ್ವತಂತ್ರ ತಜ್ಞರ ಸಮಿತಿ ದೃಢಪಡಿಸಬೇಕು.
  • ಫುಟ್‌ಬಾಲ್ ಆಟಗಾರರಿಗೆ ಪರ್ಯಾಯ ಸ್ಥಳದಲ್ಲಿ ಪ್ರತ್ಯೇಕ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕು.
  • ರಾಜಕೀಯ ಅಥವಾ ವೈಯಕ್ತಿಕ ಪ್ರತಿಷ್ಠೆಗಾಗಿ ಸಾರ್ವಜನಿಕ ಆಸ್ತಿಯ ದುರುಪಯೋಗ ನಿಲ್ಲಿಸಬೇಕು.
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img