ನವದೆಹಲಿ: ಹರಿವಂಶ್ ನಾರಾಯಣ್ ಸಿಂಗ್ ಅವರು ರಾಜ್ಯಸಭೆ ಉಪಾಧ್ಯಕ್ಷರಾಗಿ ಮೂರನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, ರಾಜಕೀಯ ವಲಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ವಿರೋಧ ಪಕ್ಷಗಳು ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆ, ಚುನಾವಣೆಯು ಅವಿರೋಧವಾಗಿ ನಡೆದಿದ್ದು, ಸದನವು ಧ್ವನಿಮತದ ಮೂಲಕ ಈ ನಿರ್ಧಾರವನ್ನು ಅಂಗೀಕರಿಸಿದೆ. ಏಪ್ರಿಲ್ 9ರಂದು ಅವರ ಹಿಂದಿನ ಅವಧಿ ಮುಗಿದ ಬಳಿಕ ಈ ಹುದ್ದೆ ಖಾಲಿಯಾಗಿತ್ತು.
ರಾಜ್ಯಸಭೆ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ ಅವರು ಕಾರ್ಯವಿಧಾನ ನಿಯಮಗಳ ಪ್ರಕಾರ ಚುನಾವಣಾ ಪ್ರಕ್ರಿಯೆಯನ್ನು ನಿಗದಿಪಡಿಸಿದ್ದು, ನಾಮಪತ್ರ ಸಲ್ಲಿಕೆಗೆ ಮಧ್ಯಾಹ್ನ 12 ಗಂಟೆಯವರೆಗೆ ಗಡುವು ನೀಡಲಾಗಿತ್ತು.
ಚುನಾವಣೆಯಲ್ಲಿ ಸದನದ ನಾಯಕ ಜೆ.ಪಿ. ನಡ್ಡಾ ಮಂಡಿಸಿದ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಿದ ಬಳಿಕ, ಸಭಾಪತಿಗಳು ಹರಿವಂಶ್ ಅವರನ್ನು ಆಯ್ಕೆಯಾಗಿ ಘೋಷಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹರಿವಂಶ್ ಅವರ ಪುನರಾಯ್ಕೆಗೆ ಅಭಿನಂದನೆ ಸಲ್ಲಿಸಿ, “ಇದು ಸದನವು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.



