ಚಾಮರಾಜನಗರ: ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕೂತನೂರು ಹಾಗೂ ಭೀಮನಬೀಡು ಗ್ರಾಮದ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಭೀಮನಬೀಡು ಗ್ರಾಮದ ಪ್ರವೀಣ್ (19) ಹಾಗೂ ಕಣ್ಣೇಗಾಲ ಗ್ರಾಮದ ಮಹದೇವಯ್ಯ (45) ಎಂದು ಗುರುತಿಸಲಾಗಿದೆ.
ಕಣ್ಣೇಗಾಲ ಗ್ರಾಮದಿಂದ ಗುಂಡ್ಲುಪೇಟೆ ಕಡೆಗೆ ಬರುತ್ತಿದ್ದ ಬೈಕ್ ಹಾಗೂ ಗುಂಡ್ಲುಪೇಟೆಯಿಂದ ಭೀಮನಬೀಡು ಕಡೆಗೆ ತೆರಳುತ್ತಿದ್ದ ಮತ್ತೊಂದು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸವಾರರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಚಿಕಿತ್ಸೆ ದೊರೆಯುವ ಮುನ್ನವೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಇಬ್ಬರ ಮೃತದೇಹಗಳನ್ನು ಗುಂಡ್ಲುಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಗುಂಡ್ಲುಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



