ಧಾರವಾಡ: ನೇಪಾಳದಲ್ಲಿ ಭಾರಿ ಪ್ರವಾಹ ಉಂಟಾಗಿದ್ದು, ಪ್ರವಾಹದ ಬಳಿಕ ಧಾರವಾಡ ಮೂಲದ ರಾಕೇಶ್ ನಾಯಕ (38) ನಾಪತ್ತೆಯಾಗಿರುವ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ರಾಕೇಶ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಕಳೆದ ಎಂಟು ವರ್ಷಗಳಿಂದ ರಾಕೇಶ್ ನಾಯಕ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು. ಪ್ರವಾಸದ ನಿಮಿತ್ತ ಕಳೆದ 12ರಂದು ನೇಪಾಳಕ್ಕೆ ತೆರಳಿದ್ದರು.
ಇಶಾ ಫೌಂಡೇಶನ್ ವತಿಯಿಂದ ಒಟ್ಟು 77 ಮಂದಿ ನೇಪಾಳ ಪ್ರವಾಸಕ್ಕೆ ತೆರಳಿದ್ದರು. ರಾಕೇಶ್ ನಾಯಕ ಅವರು ಇಶಾ ಫೌಂಡೇಶನ್ನ ಎಸ್3 ಗುಂಪಿನಲ್ಲಿದ್ದರು ಎನ್ನಲಾಗಿದೆ. ಈ ತಂಡ ನೇಪಾಳದ ಮಾನಸ ಸರೋವರ ಹಾಗೂ ಕೈಲಾಸಕ್ಕೆ ಪ್ರವಾಸ ಕೈಗೊಂಡಿತ್ತು.
ಪ್ರವಾಸ ಮುಗಿಸಿ ನಿನ್ನೆ ವಾಪಸ್ ಆಗಬೇಕಿದ್ದ ರಾಕೇಶ್ ಹಾಗೂ ಅವರ ತಂಡಕ್ಕೆ ನೇಪಾಳದಲ್ಲಿ ಭಾರಿ ಪ್ರವಾಹ ಎದುರಾಗಿದೆ. ಪ್ರವಾಹದ ಬಳಿಕ ರಾಕೇಶ್ ಯಾವುದೇ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ. ಅವರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಗುಂಪಿನಲ್ಲಿರುವ ಇತರ ಕೆಲವರೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ತಿಳಿದುಬಂದಿದೆ.
ಇದರಿಂದ ರಾಕೇಶ್ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನಾಪತ್ತೆಯಾಗಿರುವ ರಾಕೇಶ್ ಹಾಗೂ ಅವರೊಂದಿಗೆ ತೆರಳಿದ್ದವರ ಪತ್ತೆಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.



