ಮೈಸೂರು: ಬಿಜೆಪಿ ಹೈಕಮಾಂಡ್ಗೆ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ವಿಚಾರದಲ್ಲಿ ಇನ್ನೂ ಭಯ ಇದ್ದಂತೆ ಕಾಣುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷರ ಕುಟುಂಬದ ಪ್ರಭಾವದ ಬಗ್ಗೆ ಹೈಕಮಾಂಡ್ಗೆ ಇನ್ನೂ ತಪ್ಪು ಕಲ್ಪನೆ ಇದೆ. ಆದರೆ ಶೀಘ್ರದಲ್ಲೇ ವಾಸ್ತವ ಅರಿವಾಗಲಿದೆ ಎಂದು ಹೇಳಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಬಿಜೆಪಿ ಹೈಕಮಾಂಡ್ ದೊಡ್ಡ ದೊಡ್ಡ ನಾಯಕರನ್ನೇ ಮನೆಗೆ ಕಳುಹಿಸಿದೆ. ಅದೇ ರೀತಿಯ ಬೆಳವಣಿಗೆ ಕರ್ನಾಟಕದಲ್ಲೂ ನವೆಂಬರ್ ಅಥವಾ ಡಿಸೆಂಬರ್ ಒಳಗೆ ನಡೆಯಬಹುದು ಎಂದು ಯತ್ನಾಳ್ ಹೇಳಿದ್ದಾರೆ.
ಬಿಜೆಪಿ ಮತ್ತು ಕಾಂಗ್ರೆಸ್ನ ಕೆಲ ನಾಯಕರು ಸೇರಿಕೊಂಡು ಇಲ್ಲಿ ಅಡ್ಡ ಮತದಾನ ಮಾಡಿಸಿದ್ದಾರೆ ಎಂಬ ಆರೋಪ ಮಾಡಿದ ಅವರು, ಈ ಸತ್ಯ ಬಿಜೆಪಿ ಹೈಕಮಾಂಡ್ಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ವಿಚಾರಗಳಲ್ಲಿ ಹೈಕಮಾಂಡ್ ಏಕೆ ಮೌನವಾಗಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಇಲ್ಲಿ ಪಕ್ಷಗಳು ಒಂದಾಗಿಲ್ಲ, ಆದರೆ ಕೆಲವು ನಾಯಕರು ಒಂದಾಗಿದ್ದಾರೆ. ಇಂತಹ ಬೆಳವಣಿಗೆಗಳು ಪಕ್ಷವನ್ನು ಹಾಳು ಮಾಡುತ್ತಿವೆ ಎಂದು ಯತ್ನಾಳ್ ಆರೋಪಿಸಿದ್ದಾರೆ.



