ಬೆಂಗಳೂರು: ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಸ್ಥಳೀಯ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಪ್ರವಾಸಕ್ಕಾಗಿ ಬಂದಿದ್ದ ವಿದೇಶಿ ಮಹಿಳೆಯ ಮೇಲೆ ಹೋಂಸ್ಟೇನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೇ ದೌರ್ಜನ್ಯ ಎಸಗಿದರೆಂದು ದೂರು ದಾಖಲಾಗಿದೆ ಎಂದರು. ಆರಂಭದಲ್ಲಿ ಹೋಂಸ್ಟೇ ಮಾಲೀಕರು ಸೂಕ್ತವಾಗಿ ಸ್ಪಂದಿಸದಿದ್ದರೂ, ಬಳಿಕ ಪೊಲೀಸರಿಗೆ ನೀಡಿದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.
ಅತ್ಯಾಚಾರ ಹಾಗೂ ಪೋಕ್ಸೋ ಕಾಯ್ದೆ ಸಂಬಂಧಿತ ಪ್ರಕರಣಗಳಲ್ಲಿ ಸಂತ್ರಸ್ತರ ವಿವರ ಬಹಿರಂಗಪಡಿಸುವುದು ನಿಷೇಧವಾಗಿರುವುದರಿಂದ, ಪೊಲೀಸರು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಪ್ರಕರಣದ ತನಿಖೆಯನ್ನು ಜಿಲ್ಲಾ ಎಸ್‌ಪಿ ನೇತೃತ್ವದಲ್ಲಿ ಮುಂದುವರಿಸಲಾಗುತ್ತಿದೆ.
ಈ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಪೊನ್ನಣ್ಣ, ಕೊಡಗು ಜಿಲ್ಲೆಯಂತಹ ಪ್ರವಾಸಿ ತಾಣದಲ್ಲಿ ಇಂತಹ ಘಟನೆ ನಡೆದಿರುವುದು ಆತಂಕಕಾರಿ ಎಂದರು. ಹೋಂಸ್ಟೇ ವ್ಯವಸ್ಥೆಗಳ ಮೇಲೂ ಸಮಗ್ರ ತನಿಖೆ ಅಗತ್ಯವಿದೆ ಹಾಗೂ ಪ್ರವಾಸಿಗರಿಗೆ ಸೂಕ್ತ ಮಾರ್ಗಸೂಚಿಗಳನ್ನು ನೀಡಬೇಕು ಎಂದು ಹೇಳಿದರು.
ಸಂತ್ರಸ್ತ ಮಹಿಳೆ ತನಿಖೆಗೆ ಸಹಕರಿಸಿದ್ದು, ಇಂದು ವಿದೇಶಕ್ಕೆ ಮರಳುವ ಸಾಧ್ಯತೆ ಇದೆ ಎಂದು ತಿಳಿಸಿದರು. ಆರೋಪಿಗಳು ಹೋಂಸ್ಟೇಯಲ್ಲಿ ಕೆಲಸ ಮಾಡುತ್ತಿದ್ದವರೇ ಆಗಿದ್ದು, ಪ್ರಕರಣದ ತನಿಖೆಯನ್ನು ಇನ್ನಷ್ಟು ವೇಗಗೊಳಿಸಲು ಸೂಚಿಸಲಾಗಿದೆ.



