ಬೆಂಗಳೂರು: ರಾಜಧಾನಿಯ ನಂದಿನಿ ಲೇಔಟ್ ಪ್ರದೇಶದಲ್ಲಿ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಪ್ಲಾಸ್ಟಿಕ್ ಗೋಡೌನ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದಲ್ಲಿದ್ದ ಲೇಡಿಸ್ ಪಿಜಿಗೂ ವ್ಯಾಪಿಸಿದ ಪರಿಣಾಮ ಹಲವಾರು ಯುವತಿಯರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂದಿನಿ ಲೇಔಟ್ ವ್ಯಾಪ್ತಿಯಲ್ಲಿರುವ ಪ್ಲಾಸ್ಟಿಕ್ ಗೋಡೌನ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಪ್ಲಾಸ್ಟಿಕ್ ವಸ್ತುಗಳಿರುವುದರಿಂದ ಅದು ಕ್ಷಣಾರ್ಧದಲ್ಲಿ ಭಾರೀ ಪ್ರಮಾಣದಲ್ಲಿ ಹಬ್ಬಿತು. ಬೆಂಕಿಯ ತೀವ್ರತೆಗೆ ಅಕ್ಕಪಕ್ಕದ ಮನೆಗಳಿಗೂ ಜ್ವಾಲೆಗಳು ತಲುಪಿದ್ದು, ಮನೆಯ ಮುಂಭಾಗದ ಮರಗಳು ಹಾಗೂ ಕಬ್ಬಿಣದ ಗೇಟ್‌ಗಳೂ ಹೊತ್ತಿ ಉರಿದವು.
ಗೋಡೌನ್ ಪಕ್ಕದಲ್ಲೇ ಸುಮಾರು 50ಕ್ಕೂ ಹೆಚ್ಚು ಯುವತಿಯರು ವಾಸಿಸುತ್ತಿದ್ದ ಲೇಡಿಸ್ ಪಿಜಿ ಇದ್ದು, ದಟ್ಟ ಹೊಗೆ ಹಾಗೂ ಬೆಂಕಿಯ ಉರಿ ಪಿಜಿಯೊಳಗೂ ಪ್ರವೇಶಿಸುತ್ತಿದ್ದಂತೆ ಯುವತಿಯರು ಭಯಭೀತರಾದರು. ಹೊರಬರುವ ದಾರಿಯಿಲ್ಲದೆ ಆತಂಕಗೊಂಡ ಕೆಲವರು ಮೊದಲ ಮಹಡಿಯಿಂದ ಕೆಳಗೆ ಜಿಗಿದು ಪಾರಾಗಿದ್ದು, ಇನ್ನೂ ಕೆಲವರು ಪಿಜಿಯ ಕಾಂಪೌಂಡ್ ಗೋಡೆ ಹಾರಿ ಹೊರಬಂದಿದ್ದಾರೆ.
ಈ ವೇಳೆ ಜಿಗಿಯುವ ಹಾಗೂ ಗೋಡೆ ಹಾರುವ ಸಂದರ್ಭ ಕೆಲವು ಯುವತಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಆದರೆ ಬೆಂಕಿಯ ತೀವ್ರತೆಗೆ ಗೋಡೌನ್ ಸಂಪೂರ್ಣವಾಗಿ ಭಸ್ಮವಾಗಿದೆ. ಈ ಘಟನೆ ತಡರಾತ್ರಿ ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.



