ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೈಕ್ ಜೊತೆಗೆ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.
ಮೃತನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ 26 ವರ್ಷದ ವಂಶಿ ಕೃಷ್ಣ ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಸ್ಥಳೀಯರು ರಸ್ತೆ ಬದಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬೈಕ್ ಹಾಗೂ ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ ಹಾಗೂ ಶ್ವಾನದಳ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಂಡಿದೆ.
ಮೃತ ವಂಶಿ ಕೃಷ್ಣ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯಲ್ಲಿ ವಾಸವಾಗಿದ್ದು, ಎನ್ಟಿಟಿಎಫ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದನು. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಆತ, ಕಳೆದ ಕೆಲವು ವರ್ಷಗಳಿಂದ ಉದ್ಯೋಗದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.
ಘಟನೆ ದಿನ ಮಧ್ಯಾಹ್ನ ವಂಶಿ ಕೃಷ್ಣ ಪಿಜಿಯಿಂದ ಬೈಕ್ನಲ್ಲಿ ಹೊರಟಿದ್ದ. ನಂತರ ಸಂಜೆ ವೇಳೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಬಿಕ್ಕನಹಳ್ಳಿ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ವಿವರಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.



