ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂಚೋಳಿ–ತೆಲಂಗಾಣ ರಾಜ್ಯ ಹೆದ್ದಾರಿಯಲ್ಲಿ ಇಂದು ಭೀಕರ ಸರಣಿ ಅಪಘಾತ ಸಂಭವಿಸಿದೆ.
ಸಿಮೆಂಟ್ ಟ್ಯಾಂಕರ್, ಖಾಸಗಿ ಬಸ್ ಹಾಗೂ ಆಟೋ ನಡುವೆ ನಡೆದ ಈ ಅಪಘಾತದಲ್ಲಿ ಹತ್ತು ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.
ತೆಲಂಗಾಣದ ತಾಂಡೂರು ಕಡೆಯಿಂದ ಚಿಂಚೋಳಿ ಕಡೆಗೆ ಬರುತ್ತಿದ್ದ ಸಿಮೆಂಟ್ ಟ್ಯಾಂಕರ್, ಎದುರಿನಲ್ಲಿದ್ದ ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ನಿಯಂತ್ರಣ ತಪ್ಪಿದೆ. ಇದೇ ವೇಳೆ ಟ್ಯಾಂಕರ್ ಚಿಂಚೋಳಿಯಿಂದ ವೆಂಕಟಾಪುರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಯಿಂದ ಆಟೋ ಕೂಡ ಸಂಪೂರ್ಣ ಜಖಂಗೊಂಡಿದೆ.
ಘಟನೆಯಲ್ಲಿ ಗಾಯಗೊಂಡ ಹತ್ತು ಮಂದಿಯನ್ನು ತಕ್ಷಣವೇ ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಅಪಘಾತದ ಬಳಿಕ ಸ್ಥಳದಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ನಡೆಯುತ್ತಿದೆ.



