ವಿಜಯಸಾಕ್ಷಿ ಸುದ್ದಿ, ಡಂಬಳ: ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಅಬ್ಬರಕ್ಕೆ ಡಂಬಳ ಗ್ರಾಮದ ರೈತ ಹನಮಂತಪ್ಪ ಶಿವಪ್ಪ ಆಲೂರ ಅವರಿಗೆ ಸೇರಿದ ಮಣ್ಣಿನ ಮನೆಯ ಗೋಡೆ ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಮನೆ ಭಾಗಶಃ ನೆಲಸಮವಾಗಿದ್ದು, ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಯ ಗೋಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಮನೆಯ ಒಂದು ಭಾಗ ಸಂಪೂರ್ಣ ನೆಲಸಮವಾಗಿದ್ದರೆ, ಮತ್ತೊಂದು ಗೋಡೆ ಶೇ.65ರಷ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ. ಗೋಡೆ ಕುಸಿದ ಪರಿಣಾಮ ಮನೆಯ ಪಕ್ಕದಲ್ಲಿದ್ದ ಮೂರು ಟ್ರ್ಯಾಕ್ಟರ್‌ಗಳಷ್ಟು ಸಿಂಗಾ ಹೊಟ್ಟು ಸಂಪೂರ್ಣ ಹಾಳಾಗಿದ್ದು, ರೈತ ಕುಟುಂಬಕ್ಕೆ ಭಾರೀ ನಷ್ಟ ಉಂಟಾಗಿದೆ.
ಘಟನೆ ನಡೆದ ವೇಳೆ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಸಮಯಕ್ಕೆ ಸರಿಯಾಗಿ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ವಾಸಿಸಲು ಸುರಕ್ಷಿತ ಆಶ್ರಯವಿಲ್ಲದೆ ಕುಟುಂಬ ಆತಂಕದ ದಿನಗಳನ್ನು ಎದುರಿಸುತ್ತಿದೆ. ಮನೆ ಕುಸಿದಿದ್ದರೂ ಅದೇ ಅವಶೇಷಗಳ ನಡುವೆ ಅಡುಗೆ ಮಾಡುತ್ತಿರುವ ಕುಟುಂಬದ ದೃಶ್ಯ ಮನಕಲಕುವಂತಿತ್ತು.
ಕುಟುಂಬದ ಸದಸ್ಯೆ ಪ್ರೇಮವ್ವ ಹನಮಂತಪ್ಪ ಆಲೂರ ಮಾತನಾಡಿ, “ಸಾಲ ಮಾಡಿ ಕೃಷಿ ಮಾಡಿದ್ದೇವೆ. ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಮನೆ ಕಟ್ಟಲು ಸಹ ಸಾಲ ಮಾಡಿದ್ದೇವೆ. ಈಗ ಮಳೆಗೆ ಮನೆ ಕುಸಿದಿದೆ. ನಾವು ಎಲ್ಲಿಗೆ ಹೋಗಬೇಕು ಎಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರ ನಮಗೆ ಆಶ್ರಯ ಮನೆ ಕಲ್ಪಿಸಬೇಕು” ಎಂದು ಕಣ್ಣೀರಿಟ್ಟರು.
ಮಾಹಿತಿ ತಿಳಿಯುತ್ತಿದ್ದಂತೆಯೇ ಉಪ ತಹಸೀಲ್ದಾರ್ ಎಸ್.ಎಸ್. ಬಿಚಾಲಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಹಾಗೂ ಕಂದಾಯ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಗಿದ್ದು, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಸತತ ಮಳೆಯಿಂದ ಗ್ರಾಮದಲ್ಲಿ ಹಲವಾರು ಹಳೆಯ ಮಣ್ಣಿನ ಮನೆಗಳು ಅಪಾಯದ ಸ್ಥಿತಿಯಲ್ಲಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ತಹಸೀಲ್ದಾರ್ ಎಸ್.ಎಸ್. ಬಿಚಾಲಿ ಮನವಿ ಮಾಡಿದ್ದಾರೆ.
“ಸಾಲ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಈಗ ಮನೆ ಕುಸಿದಿದೆ. ನಮಗೆ ಆಶ್ರಯ ಮನೆ ಕಲ್ಪಿಸಿ.”
ಪ್ರೇಮವ್ವ ಹನಮಂತಪ್ಪ ಆಲೂರ



