ಧಾರವಾಡ: ಅನ್ಯ ಧರ್ಮದ ಯುವತಿ ಜೊತೆ ಮದುವೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ತನ್ನ ಹೇಳಿಕೆ ಬಿಡುಗಡೆ ಮಾಡಿದ ಧಾರವಾಡದ ಕಾಮಿಡಿ ಯೂಟ್ಯೂಬರ್ ಮುಕಳೆಪ್ಪ, ನನ್ನ ಪತ್ನಿ ಮತಾಂತರ ಆಗಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಾಳೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಕಳೆಪ್ಪ ಜೊತೆ ಆತನ ಪತ್ನಿ ಕೂಡ ಹೇಳಿಕೆ ನೀಡಿದ್ದಾರೆ. ಮುಕಳೆಪ್ಪ ವಿಡಿಯೋದಲ್ಲಿ ಎಲ್ಲರಿಗೂ ಸ್ಪಷ್ಟಪಡಿಸುತ್ತಾ, “ನಾವು ಒಪ್ಪಿ ಮದುವೆಯಾಗಿದ್ದೇವೆ, ಯಾವುದೇ ಲವ್ ಜಿಹಾದ್ ಅಥವಾ ಮತಾಂತರ ಮಾಡಿಲ್ಲ.
ನಾನು ನನ್ನ ಧರ್ಮ, ಪತ್ನಿ ತನ್ನ ಧರ್ಮವನ್ನು ಪಾಲಿಸುತ್ತಿದ್ದಾಳೆ. ನಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ, ನಮಗೆ ಬದುಕಲು ಬಿಡಿ” ಎಂದು ಮನವಿ ಮಾಡಿದ್ದಾರೆ. ಗಾಯತ್ರಿ ಸಹ ತಮ್ಮ ಹೇಳಿಕೆಯಲ್ಲಿ “ನಾವು ಮೂರು ವರ್ಷ ಪ್ರೀತಿಸಿ ಮದುವೆಯಾಗಿದ್ದೇವೆ, ಯಾರೂ ಮೈಂಡ್ ವಾಶ್ ಮಾಡಿಲ್ಲ. ಸುಳ್ಳು ಸುದ್ದಿ ನಂಬಬೇಡಿ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಯಾವತ್ತೂ ಹಿಂದೂ ಆಗಿಯೇ ಇದ್ದೇನೆ. ನನ್ನ ಪತಿ ನನ್ನನ್ನು ಮಾತಾಂತರ ಮಾಡಿದ್ದಾರೆ ಎನ್ನುವುದೆಲ್ಲ ಸುಳ್ಳು. ಇದನ್ನ ಯಾರೂ ನಂಬಬೇಡಿ. ಮುಕಳೆಪ್ಪನನ್ನ ಇಷ್ಟು ದಿನ ಹೇಗೆ ನೋಡಿದ್ದೀರೋ ಅದೇ ರೀತಿ ನೋಡ್ರಿ. ಕೈಮುಗಿದು ಕೇಳ್ತೇನೆ. ನಮ್ಮನ್ನ ಬದುಕಲು ಬಿಡಿ ಎಂದ ಗಾಯತ್ರಿ ಹೇಳಿದ್ದಾರೆ.



