ಬೆಂಗಳೂರು: ನಗರದಲ್ಲಿ ಉಸಿರಾಟ ಸಂಬಂಧಿತ ವೈರಲ್ ಸೋಂಕುಗಳ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ.
ವೈದ್ಯರ ಮಾಹಿತಿ ಪ್ರಕಾರ, ಕೋವಿಡ್-19 ಪ್ರಕರಣಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದರೂ, ಸೀಸನಲ್ ಇನ್‌ಫ್ಲುಯೆನ್ಜಾ ಸೋಂಕುಗಳು ಹೆಚ್ಚು ಪ್ರಮಾಣದಲ್ಲಿ ವರದಿಯಾಗುತ್ತಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್‌ಫ್ಲುಯೆನ್ಜಾ A ವೈರಸ್, ಅದರಲ್ಲೂ H3N2 ಹಾಗೂ ಸ್ವೈನ್ ಫ್ಲೂ ಪ್ರಕರಣಗಳು ಸದ್ಯ ಹೆಚ್ಚಾಗಿ ಕಾಣಿಸುತ್ತಿವೆ. ಪ್ರತಿದಿನ ಸುಮಾರು 10 ರಿಂದ 15 ಇನ್‌ಫ್ಲುಯೆನ್ಜಾ ಪ್ರಕರಣಗಳು ವರದಿಯಾಗುತ್ತಿವೆ ಎಂದು ಕಿಮ್ಸ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ತಜ್ಞೆ ಡಾ. ಅಂಕಿತಾ ತೇಜಾ ನಾರಾಯಣ್ ತಿಳಿಸಿದ್ದಾರೆ.
ಹೆಚ್ಚಿನ ರೋಗಿಗಳು ಜ್ವರ, ಕೆಮ್ಮು, ಗಂಟಲು ನೋವು ಹಾಗೂ ಮೂಗಿನಿಂದ ನೀರು ಸುರಿಯುವಂತಹ ಲಕ್ಷಣಗಳೊಂದಿಗೆ ಆಸ್ಪತ್ರೆಗೆ ಬರುತ್ತಿದ್ದು, ಸಾಮಾನ್ಯ ಚಿಕಿತ್ಸೆಯಿಂದಲೇ ಗುಣಮುಖರಾಗುತ್ತಿದ್ದಾರೆ. ಆದರೆ ಹಿರಿಯ ನಾಗರಿಕರು ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೆಲವರು ತೀವ್ರ ಉಸಿರಾಟದ ಸಮಸ್ಯೆಯಿಂದ ಐಸಿಯು ಚಿಕಿತ್ಸೆ ಪಡೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ.
ಸಾಕ್ರಾ ವರ್ಲ್ಡ್ ಆಸ್ಪತ್ರೆಯ ಹಿರಿಯ ಆಂತರಿಕ ವೈದ್ಯಕೀಯ ತಜ್ಞ ಡಾ. ಎಂ. ರವಿ ಕುಮಾರ್ ಅವರ ಪ್ರಕಾರ, ಕೋವಿಡ್-19 ಈಗ ಸ್ಥಳೀಯವಾಗಿ ನಿರಂತರವಾಗಿ ಕಾಣಿಸಿಕೊಳ್ಳುವ ಸೋಂಕಾಗಿ ರೂಪಾಂತರಗೊಂಡಿದ್ದು, JN.1 ರೂಪಾಂತರಿ ಸೌಮ್ಯ ಲಕ್ಷಣಗಳೊಂದಿಗೆ ಮುಂದುವರಿಯುತ್ತಿದೆ.
ಇನ್ನೊಂದೆಡೆ, ಶಾಲೆಗಳು ಪುನರಾರಂಭವಾಗಿರುವುದರಿಂದ ಮಕ್ಕಳ ಮೂಲಕ ಸೋಂಕು ಕುಟುಂಬಗಳಿಗೆ ಹರಡುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.



