ಶಿವಮೊಗ್ಗ: ರಸ್ತೆಗೆ ದಿಢೀರ್ ಅಡ್ಡ ಬಂದ ಕಡವೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಹೊಸನಗರ ತಾಲೂಕಿನ ನಗರ ಸಮೀಪದ ನೂಲಿಗ್ಗೇರಿ ಬಳಿ ನಡೆದಿದೆ.
ಸಾಗರ ಮೂಲದ ಪ್ರಕಾಶ್ ಎಂಬವರು ಮಣಿಪಾಲಿನಿಂದ ಸಾಗರಕ್ಕೆ ಕಾರಿನಲ್ಲಿ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ನೂಲಿಗ್ಗೇರಿ ಬಳಿ ಕಾರು ಸಾಗುತ್ತಿದ್ದಾಗ ದಿಢೀರ್ ಕಡವೆಯೊಂದು ರಸ್ತೆಗೆ ಬಂದಿದೆ.
ಕಡವೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಕಾರನ್ನು ರಸ್ತೆಯ ಬದಿಗೆ ತಿರುಗಿಸಲು ಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಕಾಶ್ ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



