HomeKarnataka Newsಕಸ್ತೂರಿ ರಂಗನ್ ವರದಿ: ನ್ಯೂನತೆ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹೊಸ ಸಮಿತಿ ರಚನೆಗೆ ನಿರ್ಧಾರ!

ಕಸ್ತೂರಿ ರಂಗನ್ ವರದಿ: ನ್ಯೂನತೆ ಪರಿಶೀಲಿಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಹೊಸ ಸಮಿತಿ ರಚನೆಗೆ ನಿರ್ಧಾರ!

For Dai;y Updates Join Our whatsapp Group

ಬೆಂಗಳೂರು: ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸಲು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಜೊತೆಗೆ, ವರದಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಭೌತಿಕ ಸರ್ವೇ ನಡೆಸಲು ಕೇಂದ್ರ ಸರ್ಕಾರದಿಂದ ಒಂದು ವರ್ಷದ ಕಾಲಾವಕಾಶ ಕೇಳಲು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿ ರಂಗನ್ ವರದಿಯ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಧಿಸೂಚನೆಯನ್ನು ಮರುಪರಿಶೀಲಿಸಬೇಕು ಹಾಗೂ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದೆ.

ರಾಜ್ಯದ ನಿಲುವಿನ ಪ್ರಕಾರ, ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶ ಹಾಗೂ ಇತರೆ ಅರಣ್ಯ ಪ್ರದೇಶಗಳನ್ನು ಮಾತ್ರ ಪರಿಗಣಿಸಬೇಕು. ಕೃಷಿ ಭೂಮಿ, ತೋಟಗಳು ಹಾಗೂ ಜನವಸತಿ ಪ್ರದೇಶಗಳನ್ನು ESA ವ್ಯಾಪ್ತಿಗೆ ಸೇರಿಸಬಾರದು ಎಂದು ಸರ್ಕಾರ ನಿರ್ಣಯದಲ್ಲಿ ತಿಳಿಸಿದೆ.

ಅದೇ ರೀತಿ, ಬಗರ್ ಹುಕುಂ, ಅರಣ್ಯ ಹಕ್ಕು ಕಾಯ್ದೆಯಡಿ ಇರುವ ಹಕ್ಕುಗಳು, ಡೀಮ್ಡ್ ಫಾರೆಸ್ಟ್, ಭೂ ಮಂಜೂರಾತಿ, ಮೇಲ್ಮನವಿ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ರಾಜ್ಯ ಸರ್ಕಾರ ಹೇಳಿದೆ. ಉಪಗ್ರಹ ಅಥವಾ ಇತರೆ ದಾಖಲೆಗಳ ಆಧಾರದ ಬದಲು ಸ್ಥಳೀಯ ವಾಸ್ತವ ಪರಿಸ್ಥಿತಿಯನ್ನು ತಿಳಿಯಲು ಭೌತಿಕ ಸರ್ವೇ ನಡೆಸಬೇಕು ಎಂಬ ನಿಲುವನ್ನು ಸರ್ಕಾರ ವ್ಯಕ್ತಪಡಿಸಿದೆ.

ಭೌತಿಕ ಸರ್ವೇ ಸೇರಿದಂತೆ ಕಸ್ತೂರಿ ರಂಗನ್ ವರದಿಯಲ್ಲಿರುವ ನ್ಯೂನತೆಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರದ ವತಿಯಿಂದ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಕಂದಾಯ ಅಧಿಕಾರಿಗಳು, ರೈತರ ಪ್ರತಿನಿಧಿಗಳು, ಕೈಗಾರಿಕಾ ವಲಯದ ಪ್ರತಿನಿಧಿಗಳು, ವಿಷಯ ಪರಿಣಿತರು, ಶೈಕ್ಷಣಿಕ ತಜ್ಞರು ಹಾಗೂ ವಿಜ್ಞಾನಿಗಳನ್ನು ಒಳಗೊಂಡಿರಲು ಉದ್ದೇಶಿಸಲಾಗಿದೆ.

ರಾಜ್ಯಮಟ್ಟದ ಸಮಿತಿಗೆ ನೆರವಾಗುವಂತೆ ಗ್ರಾಮ ಮಟ್ಟದಲ್ಲಿಯೂ ಜನಪ್ರತಿನಿಧಿಗಳನ್ನು ಒಳಗೊಂಡ ಸಮಿತಿಗಳನ್ನು ರಚಿಸುವ ಪ್ರಸ್ತಾವನೆ ಇದೆ. ಈ ಸಮಿತಿಗಳು ಸ್ಥಳೀಯ ಮಟ್ಟದ ವಾಸ್ತವಾಂಶಗಳನ್ನು ಸಂಗ್ರಹಿಸಿ ವರದಿ ಸಿದ್ಧಪಡಿಸುವ ಪ್ರಕ್ರಿಯೆಗೆ ನೆರವಾಗಲಿವೆ.

ಈ ಸಂಪೂರ್ಣ ಪ್ರಕ್ರಿಯೆಗೆ ಒಂದು ವರ್ಷದ ಕಾಲಾವಕಾಶ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಅವಧಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಹಾಗೂ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಿದ ಬಳಿಕವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಕೇಂದ್ರಕ್ಕೆ ರಾಜ್ಯದ ಅಭಿಪ್ರಾಯ ಸಲ್ಲಿಸಲು ಸೆಪ್ಟೆಂಬರ್ 27ರವರೆಗೆ ಕಾಲಾವಕಾಶವಿದೆ ಎಂದು ವಿಧಾನಸಭೆ ಚರ್ಚೆಯ ವೇಳೆ ಉಲ್ಲೇಖಿಸಲಾಗಿದೆ.

ಇನ್ನು, ರಾಜ್ಯ ಸರ್ಕಾರದ ಈ ನಿರ್ಣಯಕ್ಕೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಯಾವುದೇ ರಾಜಕಾರಣ ಬೆರೆಸದೆ, ಸರ್ವಾನುಮತದಿಂದ ನಿರ್ಣಯಕ್ಕೆ ಬೆಂಬಲ ನೀಡುವುದಾಗಿ ಅವರು ಸದನದಲ್ಲಿ ತಿಳಿಸಿದ್ದಾರೆ.

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ವಿಸ್ತೃತ ಚರ್ಚೆ ನಡೆಯುತ್ತಿದ್ದು, ರೈತರು, ಅರಣ್ಯವಾಸಿಗಳು ಹಾಗೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿನ ಜನವಸತಿ ಮತ್ತು ಭೂಮಿಯ ವಿಚಾರಗಳು ಪ್ರಮುಖವಾಗಿ ಚರ್ಚೆಗೆ ಬಂದಿವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img