ಚೆನ್ನೈ: ನಟಿಯರ ದೇಹದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಬಾಡಿ ಶೇಮಿಂಗ್ ಮತ್ತು ವದಂತಿಗಳ ವಿರುದ್ಧ ನಟಿ ಕೀರ್ತಿ ಸುರೇಶ್ ನೇರವಾಗಿ ಧ್ವನಿ ಎತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ತಾವು ಅನುಭವಿಸಿದ ಮಾನಸಿಕ ಒತ್ತಡ, ದೈಹಿಕ ಹಿನ್ನಡೆ ಮತ್ತು ಪ್ಲಾಸ್ಟಿಕ್ ಸರ್ಜರಿ ಆರೋಪಗಳ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
‘ಮಹಾನಟಿ’ ಸಿನಿಮಾ ಬಳಿಕ ಫಿಟ್ ಆಗಬೇಕೆಂಬ ಉದ್ದೇಶದಿಂದ ಜಿಮ್ ಆರಂಭಿಸಿದ್ದ ಕೀರ್ತಿ, ಕೇವಲ 9 ತಿಂಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡಿದ್ದರು. ಆದರೆ ಅವರ ಈ ಪರಿವರ್ತನೆಗೆ ಮೆಚ್ಚುಗೆ ಸಿಗುವ ಬದಲು ಟೀಕೆ ಮತ್ತು ಗಾಸಿಪ್‌ಗಳೇ ಹೆಚ್ಚಾದವು.
“ನಾನು ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ಕೆಲವರು ಹರಿಬಿಟ್ಟರು. ಆದರೆ ನಾನು ನನ್ನ ಮುಖ ಸೇರಿದಂತೆ ಎಲ್ಲವನ್ನೂ ನೈಸರ್ಗಿಕವಾಗಿಯೇ ಉಳಿಸಿಕೊಂಡಿದ್ದೇನೆ. ನನ್ನ ಕಠಿಣ ಪರಿಶ್ರಮವನ್ನು ಜನರು ಸರ್ಜರಿ ಎಂದು ತಳ್ಳಿಹಾಕಿದ್ದು ನೋವಾಯಿತು” ಎಂದು ಕೀರ್ತಿ ಹೇಳಿದ್ದಾರೆ.
ಫಿಟ್‌ನೆಸ್ ತಮ್ಮ ಜೀವನದ ಅತಿ ದೊಡ್ಡ ಗುರು ಎಂದು ಬಣ್ಣಿಸಿರುವ ಅವರು, ಯೋಗಾಭ್ಯಾಸದಿಂದ ಮಾನಸಿಕ ಶಾಂತಿ ಮತ್ತು ಆತ್ಮವಿಶ್ವಾಸ ದೊರಕಿತು ಎಂದಿದ್ದಾರೆ. ಜೊತೆಗೆ, ಸಮಾಜದ ದ್ವಂದ್ವ ಮನೋಭಾವವನ್ನೂ ಪ್ರಶ್ನಿಸಿದ್ದಾರೆ.
“ದಪ್ಪ ಇದ್ದರೆ ಸ್ಲಿಮ್ ಆಗಿ ಎನ್ನುತ್ತಾರೆ. ಸ್ಲಿಮ್ ಆದರೆ ದಪ್ಪವಾಗು ಎನ್ನುತ್ತಾರೆ. ಜನರು ನಿಜವಾಗಿ ಏನು ಬಯಸುತ್ತಾರೆ ಎಂಬುದೇ ಅರ್ಥವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದ ಕಾರಣಕ್ಕೂ ಕೀರ್ತಿ ಸ್ಪಷ್ಟನೆ ನೀಡಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದಾಗಿ ಹೇಳಿರುವ ಅವರು, “ಬಿದ್ದರೆ ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ಆದರೆ ಎಂದಿಗೂ ಸೋಲೊಪ್ಪಿಕೊಳ್ಳುವುದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.



