ವಿಜಯಸಾಕ್ಷಿ ಸುದ್ದಿ, ಗದಗ: ಹಲವು ವರ್ಷಗಳಿಂದ ಟೈಪ್–1 ಮಧುಮೇಹ ಹಾಗೂ ಅಂತಿಮ ಹಂತದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಗದಗದ ಯುವಕ ಮೇಘರಾಜ್ ಮಾರುತಿ ಕಟ್ಟಿಮನಿ ಅವರಿಗೆ ಬೆಂಗಳೂರಿನ ಆಸ್ಟರ್ ಆರ್‌ವಿ ಆಸ್ಪತ್ರೆಯ ತಜ್ಞ ವೈದ್ಯರು ಒಂದೇ ಶಸ್ತ್ರಚಿಕಿತ್ಸೆಯಲ್ಲಿ ಕಿಡ್ನಿ ಮತ್ತು ಮೇದೋಜ್ಜೀರಕ ಗ್ರಂಥಿ (ಪ್ಯಾಂಕ್ರಿಯಾಸ್) ಕಸಿಯನ್ನು ಯಶಸ್ವಿಯಾಗಿ ನೆರವೇರಿಸಿ ಹೊಸ ಜೀವನ ನೀಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆಯ ಕಸಿ ತಜ್ಞ ಡಾ. ರೊಮ್ಮೆಲ್ ಎಸ್. ಹಾಗೂ ಹೆಪಟಾಲಜಿ ಮತ್ತು ಇಂಟಿಗ್ರೇಟೆಡ್ ಲಿವರ್ ಕೇರ್ ವಿಭಾಗದ ಹಿರಿಯ ಸಲಹೆಗಾರ ಡಾ. ನವೀನ್ ಗುಂಜೂ, ಸುಮಾರು 15 ವರ್ಷಗಳಿಂದ ಟೈಪ್–1 ಮಧುಮೇಹದಿಂದ ಬಳಲುತ್ತಿದ್ದ ಮೇಘರಾಜ್ ಅವರ ಆರೋಗ್ಯ ಕ್ರಮೇಣ ಹದಗೆಟ್ಟು ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿಸಿದರು.
ರಕ್ತದಲ್ಲಿನ ಸಕ್ಕರೆ ಮಟ್ಟದ ಏರಿಳಿತ, ಹೃದಯ ಹಾಗೂ ನರ ಸಂಬಂಧಿತ ಸಮಸ್ಯೆಗಳ ನಡುವೆಯೂ ವೈದ್ಯರ ತಂಡ ಶಸ್ತ್ರಚಿಕಿತ್ಸೆಗೆ ಮುನ್ನ ಅವರ ಆರೋಗ್ಯವನ್ನು ಸ್ಥಿರಗೊಳಿಸಿತು. ಮೂರು–ನಾಲ್ಕು ತಿಂಗಳ ಕಾಯುವಿಕೆಯ ಬಳಿಕ ಸುಮಾರು 6ರಿಂದ 8 ಗಂಟೆಗಳ ಅವಧಿಯ ಸಂಕೀರ್ಣ ಶಸ್ತ್ರಚಿಕಿತ್ಸೆಯಲ್ಲಿ ಎರಡೂ ಅಂಗಾಂಗಗಳನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು.
ಶಸ್ತ್ರಚಿಕಿತ್ಸೆಯಾಗಿ ಆರು ತಿಂಗಳು ಕಳೆದಿದ್ದು, ಮೇಘರಾಜ್ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈಗ ಅವರಿಗೆ ಡಯಾಲಿಸಿಸ್, ಇನ್ಸುಲಿನ್ ಚುಚ್ಚುಮದ್ದು ಅಥವಾ ರಕ್ತದೊತ್ತಡದ ಹಲವು ಮಾತ್ರೆಗಳ ಅಗತ್ಯವಿಲ್ಲ. ಕಸಿ ಮಾಡಿದ ಕಿಡ್ನಿ ಹಾಗೂ ಪ್ಯಾಂಕ್ರಿಯಾಸ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಆರೋಗ್ಯಕರ ಹಾಗೂ ಸ್ವತಂತ್ರ ಜೀವನ ನಡೆಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು.
“ಟೈಪ್–1 ಮಧುಮೇಹದಿಂದ ಕಿಡ್ನಿ ವೈಫಲ್ಯಕ್ಕೆ ತುತ್ತಾದ ಆಯ್ದ ರೋಗಿಗಳಿಗೆ ಕಿಡ್ನಿ ಮತ್ತು ಪ್ಯಾಂಕ್ರಿಯಾಸ್ ಜಂಟಿ ಕಸಿಯೇ ಅತ್ಯುತ್ತಮ ಚಿಕಿತ್ಸೆ. ಇದು ಜೀವಿತಾವಧಿ ಹೆಚ್ಚಿಸುವುದರ ಜೊತೆಗೆ ಡಯಾಲಿಸಿಸ್ ಮತ್ತು ಇನ್ಸುಲಿನ್ ಮೇಲಿನ ಅವಲಂಬನೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.”
– ಡಾ. ರೊಮ್ಮೆಲ್ ಎಸ್.



