ಬೆಂಗಳೂರು: ನಗರ ಸೇರಿದಂತೆ ರಾಜ್ಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮನೆಮಾಡಿದೆ.
ಬೆಂಗಳೂರಿನ ವಿವಿಧ ಶ್ರೀಕೃಷ್ಣ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಅಲಂಕಾರಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯುತ್ತಿದ್ದಾರೆ.
ನಗರದ ಪ್ರಸಿದ್ಧ ಇಸ್ಕಾನ್ ದೇವಾಲಯದಲ್ಲೂ ಜನ್ಮಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಮುಖ್ಯ ಮಂದಿರವನ್ನು ವಿಶೇಷವಾಗಿ ನವಿಲಿನ ಅಲಂಕಾರದಿಂದ ಸಿಂಗರಿಸಲಾಗಿದೆ.
ರಂಗಮಂದಿರದಲ್ಲಿ ಶ್ರೀ ರಾಧಾ-ಕೃಷ್ಣ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಾಲು, ಮೊಸರು, ತುಪ್ಪ, ಜೇನು ಸೇರಿದಂತೆ ವಿವಿಧ ಪವಿತ್ರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಗುತ್ತಿದೆ. ಇಸ್ಕಾನ್ ಬೆಂಗಳೂರಿನ ಅಧಿಕೃತ ಮಾಹಿತಿಯ ಪ್ರಕಾರ ಸೆ.4ರಂದು ರಾತ್ರಿ ವಿಶೇಷ ಮಹಾಭಿಷೇಕ ಹಾಗೂ ಮಧ್ಯರಾತ್ರಿ ಮಹಾ ಆರತಿ ನಡೆಯಲಿದೆ.
ಭಕ್ತರ ಅನುಕೂಲಕ್ಕಾಗಿ ರಾತ್ರಿ 12 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಇಸ್ಕಾನ್ ಸೇರಿದಂತೆ ನಗರದ ಪ್ರಮುಖ ಕೃಷ್ಣ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ.
ಶ್ರೀಕೃಷ್ಣನ ಜನ್ಮದಿನದ ಅಂಗವಾಗಿ ಭಜನೆ, ಕೀರ್ತನೆ, ವಿಶೇಷ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.



