ಹೈದರಾಬಾದ್: ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ತನ್ನ ತೆಲುಗು ಸಿನಿ ಪಯಣವನ್ನು ಮತ್ತಷ್ಟು ವಿಸ್ತರಿಸಿದ್ದು, ಯುವ ನಟ ನರ್ನೆ ನಿತಿನ್ ಅಭಿನಯದ ಹೊಸ ಸಿನಿಮಾವನ್ನು ಅಧಿಕೃತವಾಗಿ ಘೋಷಿಸಿದೆ.
‘ಮ್ಯಾಡ್’, ‘ಆಯ್’ ಮತ್ತು ‘ಮ್ಯಾಡ್ ಸ್ಕ್ವೇರ್’ ಚಿತ್ರಗಳ ಯಶಸ್ಸಿನ ಬಳಿಕ ಭರವಸೆಯ ನಟನಾಗಿ ಹೊರಹೊಮ್ಮಿರುವ ನರ್ನೆ ನಿತಿನ್, ಇದೀಗ ನಿರ್ದೇಶಕ ರಾಧಾಕೃಷ್ಣ ರೆಡ್ಡಿ ಜೊತೆ ಕೈಜೋಡಿಸಿದ್ದಾರೆ. ‘ಜೂನಿಯರ್’ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ರಾಧಾಕೃಷ್ಣ ರೆಡ್ಡಿ ಈ ಹೊಸ ಚಿತ್ರವನ್ನು ನಿರ್ದೇಶಿಸಲಿದ್ದಾರೆ.
ನರ್ನೆ ನಿತಿನ್ ಜನ್ಮದಿನದ ಪ್ರಯುಕ್ತ ಬಿಡುಗಡೆಗೊಂಡ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಮಾದರಿಯಲ್ಲಿ ರೂಪುಗೊಂಡಿರುವ ಪೋಸ್ಟರ್‌ನಲ್ಲಿ ‘ಆಕಾಶದಲ್ಲಿರುತ್ತೆ ಮೂನ್.. ನೀವೇ ನನ್ನ ಲೈಫ್‌ಗೆ ಕ್ವೀನ್’ ಎಂಬ ಟ್ಯಾಗ್‌ಲೈನ್ ಬಳಸಲಾಗಿದೆ. ಚಿತ್ರದ ಕಥೆ ಪ್ರೇಮಕಥೆ ಆಧಾರಿತವಾಗಿರುವ ಸಾಧ್ಯತೆ ಹೆಚ್ಚಿದೆ.
ಇದೇ ವೇಳೆ ಪೋಸ್ಟರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಲೈಕ್ ಮಾಡಿರುವ ವಿನ್ಯಾಸವನ್ನು ಸೇರಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಚಿತ್ರದ ತಾಂತ್ರಿಕ ತಂಡದಲ್ಲಿ ರಾಮ ಮಾರುತಿ ಎಂ (ಛಾಯಾಗ್ರಹಣ), ನಿರಂಜನ್ ದೇವರಮನೆ (ಸಂಕಲನ) ಮತ್ತು ಶಿವ ಕಮೇಶ್ ಡಿ. (ಕಲಾ ನಿರ್ದೇಶನ) ಕಾರ್ಯನಿರ್ವಹಿಸಲಿದ್ದಾರೆ.
ಸದ್ಯ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಟಾಕ್ಸಿಕ್’, ‘ಜನ ನಾಯಗನ್’, ‘ಬೇಲ್’, ಚಿರಂಜೀವಿ ಅಭಿನಯದ ಹೊಸ ಸಿನಿಮಾ ಹಾಗೂ ಅಕ್ಷಯ್ ಕುಮಾರ್ ನಟನೆಯ ‘ಹೈವಾನ್’ ಸೇರಿದಂತೆ ಹಲವು ದೊಡ್ಡ ಪ್ರಾಜೆಕ್ಟ್‌ಗಳು ವಿವಿಧ ಹಂತಗಳಲ್ಲಿ ಸಾಗುತ್ತಿವೆ. ಈ ಸಾಲಿಗೆ ಈಗ ನರ್ನೆ ನಿತಿನ್ ಅಭಿನಯದ ಹೊಸ ತೆಲುಗು ಸಿನಿಮಾ ಸೇರ್ಪಡೆಯಾಗಿರುವುದು ಸಂಸ್ಥೆಯ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.



