HomeGadag Newsಸದ್ಗುಣ–ಸಚ್ಚಾರಿತ್ರ್ಯದಿಂದ ಬದುಕು ಉಜ್ವಲ: ರಂಭಾಪುರಿ ಜಗದ್ಗುರು

ಸದ್ಗುಣ–ಸಚ್ಚಾರಿತ್ರ್ಯದಿಂದ ಬದುಕು ಉಜ್ವಲ: ರಂಭಾಪುರಿ ಜಗದ್ಗುರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಚನ್ನಗಿರಿ: ಜೀವನದಲ್ಲಿ ಭಾಗ್ಯೋದಯವಾಗಬೇಕಾದರೆ ಆದರ್ಶ ಮೌಲ್ಯಗಳನ್ನು ಪಾಲಿಸುವುದರ ಜತೆಗೆ ಪರಿಶ್ರಮ ಮತ್ತು ಸಾಧನೆ ಅಗತ್ಯ. ಸದ್ಗುಣ, ಸಂಸ್ಕಾರ ಹಾಗೂ ಸಚ್ಚಾರಿತ್ರ್ಯದಿಂದ ಬದುಕು ಶ್ರೀಮಂತಗೊಳ್ಳುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.

ತಾಲೂಕಿನ ತಾವರೆಕೆರೆ ಶಿಲಾಮಠದಲ್ಲಿ ಲಿಂ. ಸಿದ್ಧಲಿಂಗ ಶಿವಾಚಾರ್ಯರ 55ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಬುಧವಾರ ನಡೆದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಏನೇ ಸಂಕಷ್ಟಗಳು ಎದುರಾದರೂ ಏಕಾಗ್ರತೆ ಹಾಗೂ ಆಧ್ಯಾತ್ಮಿಕ ಸಾಧನೆಯ ಮೂಲಕ ಜೀವನದಲ್ಲಿ ಶ್ರೇಯಸ್ಸು ಕಾಣಬೇಕು. ಜಗತ್ತಿನ ಕತ್ತಲೆ ಕಳೆಯಲು ಸೂರ್ಯ ಬೇಕಾದಂತೆ, ಜನರ ಭಾವನೆಗಳನ್ನು ಬೆಳಗಿಸಲು ಗುರುವಿನ ಮಾರ್ಗದರ್ಶನ ಅಗತ್ಯ. ಮಲತ್ರಯಗಳನ್ನು ನಿರ್ಮೂಲನೆ ಮಾಡಿ ಶಿವಜ್ಞಾನದ ಬೆಳಕು ಬೀರುವವನೇ ನಿಜವಾದ ಗುರು. ಕರ್ಮದ ಕತ್ತಲೆ ಕಳೆದು ಧರ್ಮದ ಬೀಜ ಬಿತ್ತಿ ಬದುಕನ್ನು ಬಂಗಾರಗೊಳಿಸಿದ ಗುರುವಿನ ಸ್ಮರಣೆ ಸದಾ ಇರಬೇಕು ಎಂದರು.

ಲಿಂ. ಸಿದ್ಧಲಿಂಗ ಶಿವಾಚಾರ್ಯರು ವಾಕ್‌ಸಿದ್ಧಿ ಪಡೆದವರಾಗಿದ್ದು, ಯಂತ್ರ–ಮಂತ್ರಗಳಲ್ಲಿ ಅಪಾರ ಶ್ರದ್ಧೆ ಹೊಂದಿದ್ದರು. ಧರ್ಮ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಅವರು ತೊಡಗಿಸಿಕೊಂಡಿದ್ದರು.

ಅವರ 55ನೇ ಪುಣ್ಯಸ್ಮರಣೋತ್ಸವ ಆಯೋಜಿಸಿರುವುದು ಭಕ್ತ ಸಮೂಹದ ಸೌಭಾಗ್ಯವಾಗಿದೆ ಎಂದರು.

ಸಮಾರಂಭ ಉದ್ಘಾಟಿಸಿದ ಯುವ ಧುರೀಣ ಮಾಡಾಳು ಮಲ್ಲಿಕಾರ್ಜುನ, ಮನುಷ್ಯ ಎಷ್ಟು ವರ್ಷ ಬದುಕಿದ ಎಂಬುದಕ್ಕಿಂತ ಬದುಕಿರುವಷ್ಟು ದಿನ ಯಾವ ರೀತಿಯಲ್ಲಿ ಬದುಕಿದ ಎಂಬುದು ಮುಖ್ಯ. ಮಲಿನಗೊಂಡ ಮನಸ್ಸನ್ನು ಶುದ್ಧಗೊಳಿಸಿ ಅರಿವಿನ ದಾರಿಯಲ್ಲಿ ನಡೆಸಲು ಗುರುವಿನ ಮಾರ್ಗದರ್ಶನ ಅಗತ್ಯ ಎಂದರು. ಲಿಂ. ಸಿದ್ಧಲಿಂಗ ಶ್ರೀಗಳು ದೈವಾಂಶ ಸಂಭೂತರಾಗಿ ಸಮಾಜಕ್ಕೆ ಬೆಳಕು ತೋರಿದ ಸದ್ಗುರುವಾಗಿದ್ದರು ಎಂದು ಸ್ಮರಿಸಿದರು.

ನೇತೃತ್ವ ವಹಿಸಿದ್ದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಭವಬಂಧನದಿಂದ ಭಕ್ತರನ್ನು ಮುಕ್ತಗೊಳಿಸುವ ಶಕ್ತಿ ಗುರುವಿಗೆ ಇದೆ. ದೇವರು, ಧರ್ಮ ಹಾಗೂ ಗುರುವನ್ನು ಎಂದಿಗೂ ಮರೆಯಬಾರದು. ಲಿಂ. ಸಿದ್ಧಲಿಂಗ ಶಿವಾಚಾರ್ಯರು ಭಕ್ತರ ಕಷ್ಟಗಳನ್ನು ಪರಿಹರಿಸಿ ಸನ್ಮಾರ್ಗದತ್ತ ಕರೆದೊಯ್ದಿದ್ದರು ಎಂದರು.

ತಾವರೆಕೆರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿ, ಸಮರ್ಥ ಗುರುವಿನ ಮಾರ್ಗದರ್ಶನದಲ್ಲಿ ಬದುಕಿದರೆ ವ್ಯಕ್ತಿ ಸಮಾಜದ ಆದರ್ಶ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಲಿಂ. ಸಿದ್ಧಲಿಂಗ ಶಿವಾಚಾರ್ಯರ ಪೂಜಾ, ತಪಸ್ಸು, ಅನುಷ್ಠಾನ ಹಾಗೂ ತತ್ವ–ಸಿದ್ಧಾಂತಗಳ ಮೂಲಕ ಭಕ್ತರನ್ನು ಸನ್ಮಾರ್ಗದತ್ತ ಕೊಂಡೊಯ್ಯುವುದು ಅವರ ಗುರಿಯಾಗಿತ್ತು ಎಂದರು.

ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯರು, ಚನ್ನಗಿರಿ ಕೇದಾರದ ಡಾ. ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು, ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯರು, ಬೇರುಗಂಡಿ ಮಠದ ರೇಣುಕ ಮಹಾಂತ ಶಿವಾಚಾರ್ಯರು, ಕೆ. ಬಿದರೆ ಪ್ರಭುಕುಮಾರ ಶಿವಾಚಾರ್ಯರು ಹಾಗೂ ಹಣ್ಣೆ ಹಿರೇಮಠದ ಮರುಳಸಿದ್ಧ ಪಂಡಿತಾರಾಧ್ಯ ಶ್ರೀಗಳು ಪಾಲ್ಗೊಂಡು ನುಡಿ ನಮನ ಸಲ್ಲಿಸಿದರು.

ತೆಂಡೇಕೆರೆ ಗಂಗಾಧರ ಶಿವಾಚಾರ್ಯರು ಸ್ವಾಗತಿಸಿದರು. ಸಂಗಯ್ಯ ಶಾಸ್ತ್ರಿಗಳು ಪ್ರಾರ್ಥಿಸಿದರು. ಬೀರೂರು ರುದ್ರಮುನಿ ಶಿವಾಚಾರ್ಯರು ನಿರೂಪಿಸಿದರು. ಸಮಾರಂಭದ ಬಳಿಕ ಅನ್ನದಾಸೋಹ ನಡೆಯಿತು.

ಇದಕ್ಕೂ ಮುನ್ನ ಲೋಕಹಿತ ಹಾಗೂ ಜನಕಲ್ಯಾಣಕ್ಕಾಗಿ ಶ್ರೀಮಠದ ಆವರಣದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಪೂಜೆ ನೆರವೇರಿಸಿ ಭಕ್ತ ಸಮೂಹಕ್ಕೆ ಶುಭ ಹಾರೈಸಿದರು.

“ದೇವರು, ಧರ್ಮ ಮತ್ತು ಶ್ರೀಗುರುವಿನ ಮೇಲೆ ನಂಬಿಕೆ–ವಿಶ್ವಾಸವನ್ನಿಟ್ಟು ಬಾಳಿದರೆ ಜೀವನ ಸಾರ್ಥಕವಾಗುತ್ತದೆ. ಲಿಂ. ಸಿದ್ಧಲಿಂಗ ಶಿವಾಚಾರ್ಯರು ಧರ್ಮ ಹಾಗೂ ಸಮಾಜಮುಖಿಯಾಗಿ ಸಲ್ಲಿಸಿದ ಸೇವೆ ಭಕ್ತ ಸಮುದಾಯಕ್ಕೆ ಸದಾ ಸ್ಮರಣೀಯ.”

— ಶ್ರೀ ರಂಭಾಪುರಿ ಜಗದ್ಗುರುಗಳು

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img