ವಿಜಯಸಾಕ್ಷಿ ಸುದ್ದಿ, ಗದಗ: ಧರ್ಮವು ಯಾವುದೇ ವ್ಯಕ್ತಿ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಬಿದ್ದವರನ್ನು, ಬೀಳುತ್ತಿರುವವರನ್ನು ಹಾಗೂ ಬೀಳುವ ಸ್ಥಿತಿಯಲ್ಲಿರುವವರನ್ನು ಎತ್ತಿ ನಿಲ್ಲಿಸುವುದೇ ನಿಜವಾದ ಧರ್ಮ ಎಂದು ಕಾಶಿ ಜಂಗಮವಾಡಿಮಠದ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ನಗರದ ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಗದಗ-ಬೆಟಗೇರಿ ಜಗದ್ಗುರು ಪಂಚಾಚಾರ್ಯ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ‘ಶ್ರೀ ಸಿದ್ಧಾಂತ ಶಿಖಾಮಣಿ’ ಆಧ್ಯಾತ್ಮಿಕ ಪ್ರವಚನ ಮಾಲಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಯುವಕರು ಮೊಬೈಲ್ ಹಾಗೂ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಹೊರಬಂದು ಭಾರತೀಯ ಸಂಸ್ಕೃತಿ, ಸಂಸ್ಕಾರ, ಗುರು-ಹಿರಿಯರಿಗೆ ಗೌರವ ಮತ್ತು ಮಾತೃಭೂಮಿಯ ಮೇಲಿನ ಅಭಿಮಾನ ಬೆಳೆಸಿಕೊಳ್ಳಬೇಕು. ಬಾಲ್ಯದಿಂದಲೇ ಧರ್ಮ ಸಂಸ್ಕಾರಗಳನ್ನು ಬೆಳೆಸಿದಾಗ ಮಾತ್ರ ಭವ್ಯ ಭಾರತದ ನಿರ್ಮಾಣ ಸಾಧ್ಯ ಎಂದು ಕರೆ ನೀಡಿದರು.
ಸನಾತನ ಧರ್ಮವು ಶಾಶ್ವತ ಜೀವನ ಪದ್ಧತಿಯಾಗಿದ್ದು, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ. ಸಮಾಜದಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಪ್ರಯತ್ನಗಳನ್ನು ತೊರೆದು ಸಮುದಾಯದ ಏಕತೆಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಧರ್ಮಸಭೆಯಲ್ಲಿ ನರೇಗಲ್ಲ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಕ್ತಿಮಂದಿರದ ಪೂಜ್ಯ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು. ಈಶ್ವರಯ್ಯ ವಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರು ಬಾಳಿಹಳ್ಳಿಮಠ, ಕಳೆದ 28 ವರ್ಷಗಳಿಂದ ನಡೆಯುತ್ತಿರುವ ಸಿದ್ಧಾಂತ ಶಿಖಾಮಣಿ ಪ್ರವಚನ ಮಾಲಿಕೆ ಧಾರ್ಮಿಕ ಜಾಗೃತಿ ಹಾಗೂ ವೈಚಾರಿಕತೆ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಹಲವರಿಗೆ ಗುರುರಕ್ಷೆ ನೀಡಿ ಆಶೀರ್ವದಿಸಲಾಯಿತು. ಮಹೇಶ ಕುಂದ್ರಾಳಹಿರೇಮಠ ಸಂಗೀತ ಸೇವೆ ಸಲ್ಲಿಸಿದರು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
“ಧರ್ಮವು ಯಾವುದೇ ಒಂದು ವ್ಯಕ್ತಿ, ಜಾತಿ ಅಥವಾ ಸಮುದಾಯಕ್ಕೆ ಸೀಮಿತವಲ್ಲ. ಬಿದ್ದವರನ್ನು ಎತ್ತಿ ನಿಲ್ಲಿಸುವುದೇ ನಿಜವಾದ ಧರ್ಮ.”
– ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು



