ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದಲ್ಲಿರುವ ಐತಿಹಾಸಿಕ ಬಲಭೀಮ ಆಂಜನೇಯ ದೇವಸ್ಥಾನದ ನಿರ್ಮಾಣ ಹಂತದ ಮಹಾದ್ವಾರದ ಗೋಪುರಕ್ಕೆ ಸಿಡಿಲು ಬಡಿದಿದೆ.
ಸಿಡಿಲಿನ ತೀವ್ರತೆಗೆ ಗೋಪುರದ ಹಲವು ಭಾಗಗಳಿಗೆ ಹಾನಿಯಾಗಿದ್ದು, ಭಾರಿ ಬಿರುಕುಗಳು ಕಾಣಿಸಿಕೊಂಡಿವೆ.
ಗ್ರಾಮಸ್ಥರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಮಹಾಗೋಪುರದ ಕಾಮಗಾರಿ ಅಂತಿಮ ಹಂತದಲ್ಲಿತ್ತು. ಇದೇ ವೇಳೆ ಸಿಡಿಲು ಬಡಿದ ಪರಿಣಾಮ ಗೋಪುರದ ಮೇಲೆ ಹಾರಿಸಲಾಗಿದ್ದ ಭಗವಾಧ್ವಜಗಳು ಸುಟ್ಟು ಕರಕಲಾಗಿವೆ.
ಅಲ್ಲದೆ, ಗೋಪುರಕ್ಕೆ ಅಳವಡಿಸಲಾಗಿದ್ದ ಅಲಂಕಾರಿಕ ಗೊಂಬೆಗಳ ದೇಹದ ಭಾಗಗಳು ಮುರಿದುಬಿದ್ದಿವೆ. ಗೋಪುರದ ವಿವಿಧ ಭಾಗಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಘಟನೆಯಿಂದ ಭಕ್ತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.



