ಬೆಂಗಳೂರು: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಜೈಲಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 2010ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಅಬ್ದುಲ್ ಖಾದರ್‌ಗೆ ಗುರುವಾರ ಏಕಾಏಕಿ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದು, ಅವರನ್ನು ತಕ್ಷಣ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಹೃದಯಾಘಾತದಿಂದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ತೀರ್ಪು ಹೊರಬೀಳುವ ಸಾಧ್ಯತೆ ಇತ್ತು. ಆದರೆ ತೀರ್ಪು ಪ್ರಕಟವಾಗುವ ಮೊದಲೇ ಆರೋಪಿ ಸಾವನ್ನಪ್ಪಿರುವುದು ಗಮನಾರ್ಹವಾಗಿದೆ.
ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ನಿವಾಸಿಯಾಗಿದ್ದ ಅಬ್ದುಲ್ ಖಾದರ್ ವಿರುದ್ಧ 2008ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದ್ದು, ಈ ಸಂಬಂಧ ರಾಷ್ಟ್ರೀಯ ತನಿಖಾ ದಳ ಅವರನ್ನು ಬಂಧಿಸಿತ್ತು.



