ಆನೇಕಲ್: ತಾಯಿಯಿಂದ ಬೇರ್ಪಟ್ಟ ಮರಿಯಾನೆ ಆಹಾರ ಹುಡುಕುತ್ತಾ ಗ್ರಾಮಕ್ಕೆ ಬಂದ ಘಟನೆ ತಮಿಳುನಾಡಿನ ಡೆಂಕಣಿಕೋಟೆ ಗಡಿಭಾಗದಲ್ಲಿ ನಡೆದಿದೆ.
ತಾಯಿ ಆನೆಯ ಗುಂಪಿನಿಂದ ದೂರವಾದ ಮರಿಯಾನೆ, ಜಮೀನಿನ ಮನೆಯೊಂದರ ಬಳಿ ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಮರಿಯಾನೆ ಆಹಾರಕ್ಕಾಗಿ ಗ್ರಾಮಕ್ಕೆ ಪ್ರವೇಶಿಸಿದ್ದು, ಖಾಸಗಿ ತೋಟದ ಮನೆಯ ಬಳಿ ಕಾಣಿಸಿಕೊಂಡಿದೆ. ಆನೆ ಕಂಡ ಸ್ಥಳೀಯರು ಕೂಡಲೇ ಜಮಾಯಿಸಿದ್ದು, ಕಬ್ಬು ಹಾಗೂ ಬಾಳೆಹಣ್ಣು ನೀಡಿ ಅದರ ಹಸಿವು ನೀಗಿಸಿದ್ದಾರೆ.
ಘಟನೆ ಕುರಿತು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮರಿಯಾನೆಯನ್ನು ಸುರಕ್ಷಿತವಾಗಿ ತಾಯಿ ಆನೆಯ ಗುಂಪಿಗೆ ಸೇರಿಸಲು ಅರಣ್ಯ ಇಲಾಖೆ ಹರಸಾಹಸ ನಡೆಸುತ್ತಿದೆ.
ಪ್ರಸ್ತುತ ಅರಣ್ಯ ಸಿಬ್ಬಂದಿ ತಾಯಿ ಆನೆಯ ಗುಂಪಿನ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.



