ಮೈಸೂರು: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 14ರಂದು ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳು ಹಾಗೂ ಎಲ್ಲಾ ರೀತಿಯ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಾಲಿಕೆಯ ಆದೇಶದಂತೆ ಅಂದು ಕುರಿ, ಮೇಕೆ ಮಾಂಸ ಮಾರಾಟದ ಕಸಾಯಿಖಾನೆಗಳು, ಚಿಕನ್ ಸೆಂಟರ್‌ಗಳು, ಮಟನ್ ಅಂಗಡಿಗಳು, ಹಂದಿ ಮಾಂಸ ಮಾರಾಟ ಮಳಿಗೆಗಳು ಹಾಗೂ ಮೀನು ಮಾರಾಟದ ಅಂಗಡಿಗಳು ಕಡ್ಡಾಯವಾಗಿ ಬಂದ್ ಇರಬೇಕು. ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಒಂದು ದಿನದ ಮಟ್ಟಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ.
ಗಣೇಶ ಚತುರ್ಥಿ ದಿನದಂದು ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡುವುದರ ಜೊತೆಗೆ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯ ವಾತಾವರಣ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ:
ನಿಷೇಧದ ನಡುವೆಯೂ ಯಾರಾದರೂ ಮಾಂಸ ಮಾರಾಟ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ನಗರದಾದ್ಯಂತ ವಿಶೇಷ ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಸಲಾಗುತ್ತದೆ.
ಹೀಗಾಗಿ ಸೆಪ್ಟೆಂಬರ್ 14ರಂದು ಮೈಸೂರಿನಲ್ಲಿ ಮಾಂಸ ಮಾರಾಟಕ್ಕೆ ಸಂಪೂರ್ಣ ಬ್ರೇಕ್ ಬೀಳಲಿದೆ. ಮಾಂಸ ಮಾರಾಟಗಾರರು, ಹೋಟೆಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮಾಲೀಕರು ಪಾಲಿಕೆಯ ಆದೇಶವನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ಸೂಚಿಸಲಾಗಿದೆ.



