ಹಾಲು ಮತ್ತು ಮೊಸರು ಭಾರತೀಯ ಆಹಾರ ಪದ್ಧತಿಯ ಪ್ರಮುಖ ಭಾಗವಾಗಿವೆ.
ಬೆಳಗಿನ ಚಹಾದಿಂದ ಹಿಡಿದು ಊಟದವರೆಗೂ ಇವುಗಳ ಬಳಕೆ ಸಾಮಾನ್ಯವಾಗಿದೆ. ಪ್ರೋಟೀನ್, ಕ್ಯಾಲ್ಸಿಯಂ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಹಾಲು ಮತ್ತು ಮೊಸರು ದೇಹದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡುತ್ತವೆ.
ಪೋಷಕಾಂಶ ತಜ್ಞರ ಪ್ರಕಾರ, ತೂಕ ಇಳಿಕೆ ಹಾಗೂ ಜೀರ್ಣಕ್ರಿಯೆಯ ವಿಚಾರದಲ್ಲಿ ಹಾಲು ಮತ್ತು ಮೊಸರು ವಿಭಿನ್ನ ರೀತಿಯಲ್ಲಿ ಕೆಲಸ ಮಾಡುತ್ತವೆ. ಹಾಲು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡಿದರೆ, ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.
ಹಾಲು ಮತ್ತು ಮೊಸರಿನ ಪೋಷಕಾಂಶಗಳಲ್ಲಿ ವ್ಯತ್ಯಾಸ:
ಹಾಲು ಮತ್ತು ಮೊಸರು ಎರಡೂ ಹಾಲಿನಿಂದ ತಯಾರಾಗುತ್ತವೆ. ಆದರೆ ಮೊಸರನ್ನು ಹುದುಗಿಸುವ ಪ್ರಕ್ರಿಯೆಯಿಂದ ಅದರ ಗುಣಗಳಲ್ಲಿ ಬದಲಾವಣೆ ಆಗುತ್ತದೆ.
100 ಮಿ.ಲೀ ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ ಜೊತೆಗೆ ಸುಮಾರು 3.2 ಗ್ರಾಂ ಪ್ರೋಟೀನ್ ಇರುತ್ತದೆ. 100 ಗ್ರಾಂ ಮೊಸರಿನಲ್ಲಿ ಸುಮಾರು 3.5 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಮೊಸರಿನಲ್ಲಿ ಲ್ಯಾಕ್ಟೋಸ್ ಪ್ರಮಾಣ ಕಡಿಮೆ ಇರುವುದರಿಂದ ಕೆಲವರಿಗೆ ಹಾಲಿಗಿಂತ ಸುಲಭವಾಗಿ ಜೀರ್ಣವಾಗುತ್ತದೆ.
ತೂಕ ಇಳಿಸಲು ಯಾವುದು ಉತ್ತಮ?
ತೂಕ ಇಳಿಸಲು ಹಾಲು ಮತ್ತು ಮೊಸರು ಎರಡೂ ಸಹಾಯಕವಾಗಬಹುದು. ಹಾಲಿನಲ್ಲಿರುವ ಪ್ರೋಟೀನ್ ಹೆಚ್ಚು ಸಮಯ ಹೊಟ್ಟೆ ತುಂಬಿರುವ ಭಾವನೆ ನೀಡುತ್ತದೆ. ಇದರಿಂದ ಅನಗತ್ಯ ಹಸಿವು ಕಡಿಮೆಯಾಗುತ್ತದೆ.
ತೂಕ ಇಳಿಸಲು ಬಯಸುವವರು ಕಡಿಮೆ ಕೊಬ್ಬಿನ ಹಾಲು ಹಾಗೂ ಸಕ್ಕರೆ ಸೇರಿಸದ ಹಾಲನ್ನು ಸೇವಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
ಮೊಸರಿನಲ್ಲಿರುವ ಪ್ರೋಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹದ ಚಯಾಪಚಯ ಕ್ರಿಯೆಗೆ ಸಹಾಯ ಮಾಡಬಹುದು.
ಜೀರ್ಣಕ್ರಿಯೆಗೆ ಯಾವುದು ಬೆಸ್ಟ್?
ಹೊಟ್ಟೆಯ ಆರೋಗ್ಯಕ್ಕೆ ಮೊಸರು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಕರುಳಿನ ಆರೋಗ್ಯವನ್ನು ಕಾಪಾಡುತ್ತವೆ.
ಆದರೆ ಸ್ನಾಯುಗಳನ್ನು ಬಲಪಡಿಸಲು ಹಾಗೂ ವ್ಯಾಯಾಮ ಮಾಡುವವರಿಗೆ ಹಾಲು ಉತ್ತಮ ಪ್ರೋಟೀನ್ ಮೂಲವಾಗಬಹುದು.
ದಿನಕ್ಕೆ ಎಷ್ಟು ಸೇವಿಸಬೇಕು?
ತಜ್ಞರ ಪ್ರಕಾರ, ಸಾಮಾನ್ಯ ವ್ಯಕ್ತಿಯು ದಿನಕ್ಕೆ ಸುಮಾರು 500 ರಿಂದ 600 ಮಿ.ಲೀ ಹಾಲು ಸೇವಿಸಬಹುದು. ಒಂದು ಅಥವಾ ಎರಡು ಕಪ್ ಮೊಸರು ಸೇವಿಸುವುದು ಕೂಡ ಆರೋಗ್ಯಕ್ಕೆ ಒಳ್ಳೆಯದು.
ವ್ಯಾಯಾಮದ ನಂತರ ಹಾಲು ಸೇವಿಸುವುದು ಉತ್ತಮ. ಊಟದ ಸಮಯದಲ್ಲಿ ಮೊಸರು ಸೇವಿಸುವುದು ಸಹ ಪ್ರಯೋಜನಕಾರಿ ಎಂದು ತಜ್ಞರು ತಿಳಿಸಿದ್ದಾರೆ.
ಯಾರು ಎಚ್ಚರಿಕೆ ವಹಿಸಬೇಕು?
ಕರುಳಿನ ಆರೋಗ್ಯ ಸುಧಾರಿಸಬೇಕೆಂದರೆ ಮೊಸರು ಉತ್ತಮ. ಸ್ನಾಯುಗಳ ಬೆಳವಣಿಗೆ ಹಾಗೂ ಶಕ್ತಿಗಾಗಿ ಹಾಲು ಸಹಾಯಕ.
ಆದರೆ ಹಾಲು ಅಥವಾ ಮೊಸರು ಸೇವಿಸಿದ ಬಳಿಕ ಅಸ್ವಸ್ಥತೆ ಉಂಟಾಗುವವರು ಅಥವಾ ಲ್ಯಾಕ್ಟೋಸ್ ಸಮಸ್ಯೆ ಇರುವವರು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಒಟ್ಟಿನಲ್ಲಿ, ತೂಕ ಇಳಿಕೆಗಾಗಿ ಹಾಲು ಮತ್ತು ಮೊಸರು ಎರಡೂ ಸಹಾಯ ಮಾಡಬಹುದು. ನಿಮ್ಮ ದೇಹದ ಅಗತ್ಯಕ್ಕೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ.



