ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ನೆಟ್‌ವರ್ಕ್ ಸಮಸ್ಯೆ ತೀವ್ರಗೊಂಡಿದ್ದು, ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೆಟ್ರೋ ಒಳಭಾಗದಲ್ಲಿ ಮೊಬೈಲ್ ಸಿಗ್ನಲ್ ಸಿಗದೇ ಆನ್‌ಲೈನ್ ವ್ಯವಹಾರಗಳು ಅಸ್ತವ್ಯಸ್ತವಾಗಿವೆ.
ಲಕ್ಷಾಂತರ ಮಂದಿ ಪ್ರತಿದಿನ ಪ್ರಯಾಣಿಸುವ ಮೆಟ್ರೋದಲ್ಲಿ ಇಂತಹ ಸಮಸ್ಯೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ ಆರ್.ವಿ ರಸ್ತೆ ಮೆಟ್ರೋ ಸ್ಟೇಷನ್, ಜಯನಗರ ಸೇರಿದಂತೆ ಹಲವೆಡೆ ಸಿಗ್ನಲ್ ಸಮಸ್ಯೆ ತಲೆದೋರಿದೆ.
ಈ ಹಿನ್ನೆಲೆಯಲ್ಲಿ BMRCL ಪ್ರಯಾಣಿಕರಿಗೆ ನೋಟಿಸ್ ನೀಡಿದ್ದು, ಮೆಟ್ರೋ ನಿಲ್ದಾಣದ ಒಳಗೆ ಆನ್‌ಲೈನ್ ಪೇಮೆಂಟ್, ಬುಕ್ಕಿಂಗ್ ಅಥವಾ ಕಾರ್ಡ್ ಲೋಡಿಂಗ್ ಮಾಡಲು ಸಾಧ್ಯವಿಲ್ಲದ ಕಾರಣ, ಸ್ಟೇಷನ್ ಹೊರಗಡೆ ಈ ಕಾರ್ಯಗಳನ್ನು ಮುಗಿಸಿಕೊಳ್ಳುವಂತೆ ಸೂಚಿಸಿದೆ.
ನೆಟ್‌ವರ್ಕ್ ಇಲ್ಲದ ಕಾರಣ ಓಲಾ, ಊಬರ್ ಬುಕ್ಕಿಂಗ್ ಸೇರಿದಂತೆ ಹಲವು ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದು, ಪ್ರಯಾಣಿಕರು ಸ್ಟೇಷನ್ ಹೊರಗೆ ಬಂದು ನೆಟ್‌ವರ್ಕ್ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆ ಕುರಿತು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದು, ತಕ್ಷಣವೇ ನೆಟ್‌ವರ್ಕ್ ವ್ಯವಸ್ಥೆ ಸುಧಾರಿಸುವಂತೆ ಆಗ್ರಹಿಸುತ್ತಿದ್ದಾರೆ.



