ಬೆಂಗಳೂರು: ಬೇಸಿಗೆ ರಜೆ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಜೂನ್ 1ರಿಂದ ಕರ್ನಾಟಕದಾದ್ಯಂತ ಶಾಲೆಗಳು ಪುನರಾರಂಭವಾಗಲಿವೆ. ಈಗಾಗಲೇ ವಿದ್ಯಾರ್ಥಿಗಳು ಹೊಸ ಶೈಕ್ಷಣಿಕ ವರ್ಷದ ಸಿದ್ಧತೆಯಲ್ಲಿ ತೊಡಗಿದ್ದು, ಶಾಲೆ ಆರಂಭಕ್ಕೂ ಮುನ್ನ ಶಿಕ್ಷಣ ಇಲಾಖೆ ಮಹತ್ವದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಯವಾಗುವಂತೆ ಹೊರಡಿಸಿರುವ ಈ ಮಾರ್ಗಸೂಚಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಜೊತೆಗೆ, ದ್ವಿಭಾಷಾ ಬೋಧನಾ ಪದ್ಧತಿಯನ್ನು ಜಾರಿಗೆ ತರಲು ಸೂಚಿಸಲಾಗಿದೆ.
ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆ ಶಾಲಾ ಕಟ್ಟಡಗಳ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲಾ ಕಟ್ಟಡ, ಶೌಚಾಲಯ ಅಥವಾ ಅಡುಗೆ ಕೋಣೆಗಳು ಶಿಥಿಲಾವಸ್ಥೆಯಲ್ಲಿದ್ದರೆ ತಕ್ಷಣವೇ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ದುರಸ್ತಿ ಅಥವಾ ತೆರವು ಕಾರ್ಯ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.
ಮಾರ್ಗಸೂಚಿಯ ಪ್ರಮುಖ ಅಂಶಗಳು:
- ಶಾಲಾ ಕಟ್ಟಡಗಳು, ಶೌಚಾಲಯಗಳು ಮತ್ತು ಅಡುಗೆ ಕೋಣೆಗಳ ಸುರಕ್ಷತಾ ಪರಿಶೀಲನೆ ಕಡ್ಡಾಯ.
- 6ರಿಂದ 14 ವರ್ಷದ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಕ್ರಮ.
- ಉರ್ದು-ಇಂಗ್ಲಿಷ್ ದ್ವಿಭಾಷಾ ಮಾಧ್ಯಮವನ್ನು ಈ ವರ್ಷದಿಂದಲೇ ಆರಂಭಿಸಲು ಅವಕಾಶ.
- ಇಲಾಖೆಯ ಪೂರ್ವಾನುಮತಿ ಪಡೆದ ಶಾಲೆಗಳಲ್ಲಿ ದ್ವಿಭಾಷಾ ಬೋಧನಾ ಪದ್ಧತಿ ಜಾರಿ.
- ಮೇ 28ರೊಳಗೆ ಶಾಲೆಗಳ ಸ್ವಚ್ಛತೆ, ಕುಡಿಯುವ ನೀರು ಹಾಗೂ ಸುರಕ್ಷತಾ ತಪಾಸಣೆ ಪೂರ್ಣಗೊಳಿಸಬೇಕು.
- ಮೇ 29ರಂದು ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಿ ಪೂರ್ವ ಸಿದ್ಧತೆ ಕೈಗೊಳ್ಳಬೇಕು.
- ಜೂನ್ 1ರಂದು ಶಾಲಾ ಪ್ರಾರಂಭೋತ್ಸವ ಹಾಗೂ ವಿದ್ಯಾರ್ಥಿ ದಾಖಲಾತಿ ಪ್ರಕ್ರಿಯೆ ಆರಂಭ.
- ಜೂನ್ 30ರಂದು ದಾಖಲಾತಿ ಆಂದೋಲನ ಮುಕ್ತಾಯ.
- ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಡಿಜಿಟಲ್ ಹಾಜರಾತಿ ವ್ಯವಸ್ಥೆ ಕಡ್ಡಾಯ.
ಹೊಸ ಶೈಕ್ಷಣಿಕ ವರ್ಷವನ್ನು ಸುಗಮವಾಗಿ ಆರಂಭಿಸಲು ಶಿಕ್ಷಣ ಇಲಾಖೆ ಈ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಾಗೂ ಶಿಕ್ಷಣದ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ.



