ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಹಳೆ ಕಚೇರಿಯಲ್ಲಿ ಬುಧವಾರ ನೋ-ಮ್ಯಾಪಿಂಗ್ ಹಾಗೂ ಅನಾಮಲೀಸ್ ಪಟ್ಟಿಯಲ್ಲಿರುವ ಮತದಾರರ ವಿಚಾರಣೆ ಕೇಂದ್ರಕ್ಕೆ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ನಂದಾ ಹಣಬರಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು, ಶಿರಹಟ್ಟಿ ವಿಧಾನಸಭಾ ಕ್ಷೇತ್ರದಲ್ಲಿ ನೋ-ಮ್ಯಾಪಿಂಗ್ ಪಟ್ಟಿಯಲ್ಲಿ 1,606 ಹಾಗೂ ಅನಾಮಲೀಸ್ ಪಟ್ಟಿಯಲ್ಲಿ 4,197 ಮತದಾರರು ಸೇರಿದಂತೆ ಒಟ್ಟು 5,803 ಮತದಾರರಿದ್ದಾರೆ. ಈ ಪ್ರಕರಣಗಳ ವಿಲೇವಾರಿಗೆ ಶಿರಹಟ್ಟಿ, ಮುಂಡರಗಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ತಹಶೀಲ್ದಾರರು ಸೇರಿದಂತೆ ಒಟ್ಟು 16 ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಈ ಪೈಕಿ ಈಗಾಗಲೇ 998 ಮತದಾರರ ಪ್ರಕರಣಗಳ ವಿಲೇವಾರಿ ಕಾರ್ಯ ಪ್ರಗತಿಯಲ್ಲಿದ್ದು, ಇಲ್ಲಿಯವರೆಗೆ 386 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದಿರುವ ಮತದಾರರಿಗೆ ಆಯಾ ಮತಗಟ್ಟೆ ವ್ಯಾಪ್ತಿಯ ಬಿಎಲ್ಒಗಳ ಮೂಲಕ ನೋಟಿಸ್ ನೀಡಲಾಗಿದ್ದು, ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನೋಟಿಸ್ ಪಡೆದ ಮತದಾರರ ವಿಚಾರಣೆ ನಡೆಸುತ್ತಿದ್ದಾರೆ ಎಂದರು.
ನೋಟಿಸ್ ಪಡೆದಿರುವ ಮತದಾರರು ತಮಗೆ ನಿಗದಿಪಡಿಸಿದ ದಿನಾಂಕದಂದು ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಿ, ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಈ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಂದಾ ಹಣಬರಟ್ಟಿ ಮನವಿ ಮಾಡಿದರು.
ನಂತರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಿಲೇಶ ಹಾದಿಮನಿ ಅವರು ಶಿರಹಟ್ಟಿಯಲ್ಲಿ ವಿತರಿಸಲಾಗಿದ್ದ ನೋಟಿಸ್ಗಳಿಗೆ ಸಂಬಂಧಿಸಿದ ಮತದಾರರ ವಿಚಾರಣೆ ನಡೆಸಿದರು.



