ಗದಗ: ತಾಲೂಕಿನ ಸೊರಟೂರು ಬಳಿ ನಡೆದಿದ್ದ ಪೊಲೀಸ್ ಜೀಪ್ ಅಪಘಾತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಟಗೇರಿ ಠಾಣೆಯ ಎಎಸ್ಐ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಪೊಲೀಸ್ ಜೀಪ್ಗೆ ಅಡ್ಡ ಬಂದ ಕತ್ತೆಕಿರುಬ; ಬೆಟಗೇರಿ ಠಾಣೆ ಎಎಸ್ಐ ಗಂಭೀರ, ಇನ್ನಿಬ್ಬರಿಗೆ ಗಾಯ
ಬೆಟಗೇರಿ ಠಾಣೆಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಶಿಂಸಾಬ್ ಹರಿವಾಣ (59) ಮೃತಪಟ್ಟಿದ್ದಾರೆ.
ಮಂಗಳವಾರ ಬೆಳಗಿನ ಜಾವ ಸೊರಟೂರು ಸಮೀಪ ಕತ್ತೆ ಕಿರುಬವೊಂದು ಪೊಲೀಸ್ ಜೀಪ್ಗೆ ಅಡ್ಡ ಬಂದು ಸ್ಟೇರಿಂಗ್ ಲಾಕ್ ಆಗಿ ಅಪಘಾತವಾಗಿತ್ತು. ಅಪಘಾತದಲ್ಲಿ ಕಿಟಕಿ ಗಾಜುಗಳು ಎಎಸ್ಐ ಕಾಶಿಂಸಾಬ್ ಹರಿವಾಣ ಅವರ ತಲೆಗೆ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ.
ಜೀಪ್ ನಲ್ಲಿದ್ದ ವೈರ್ಲೆಸ್ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಗೌಡ, ಚಾಲಕ ಓಂ ನಾಥ್ಗೆ ಗಾಯಗೊಂಡಿದ್ದರು.
ಲಕ್ಷ್ಮೇಶ್ವರದಿಂದ ಗಣಪತಿ ವಿಸರ್ಜನೆಯ ಬಂದೂಬಸ್ತ್ ಮುಗಿಸಿಕೊಂಡು ಛಬ್ಬಿ ಶಿರಹಟ್ಟಿ ಮಾರ್ಗವಾಗಿ ಗದಗ ಕಡೆಗೆ ಬರುತ್ತಿದ್ದಾಗ ಸೊರಟೂರು ಬಳಿ ಈ ಘಟನೆ ನಡೆದಿತ್ತು, ಪೊಲೀಸ್ ಜೀಪ್ ಗೂಡ್ಸ್ ವಾಹನಕ್ಕೂ ಡಿಕ್ಕಿ ಹೊಡೆದಿತ್ತು ಎನ್ನಲಾಗಿದೆ. ಮುಳಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಎಎಸ್ಐ ಕಾಶಿಂಸಾಬ್ ಹರಿವಾಣ ಅವರ ನಿಧನಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ತಾಲೂಕಿನ ಅಡವಿಸೋಮಾಪೂರ ಗ್ರಾಮಸ್ಥರು ಕಂಬಿನಿ ಮಿಡಿದಿದ್ದಾರೆ.



