ರಾಯಚೂರು: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಯಾಗಲೆಂದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ರೈತರು ನಡೆಸಿದ ಪಾದಯಾತ್ರೆಗೆ ವರುಣ ತಕ್ಷಣವೇ ಸ್ಪಂದಿಸಿದಂತೆ ಮಾನ್ವಿಯಲ್ಲಿ ಅಪರೂಪದ ದೃಶ್ಯ ಕಂಡುಬಂದಿದೆ. ಪಾದಯಾತ್ರೆ ಸಾಗುತ್ತಿದ್ದ ಸಂದರ್ಭವೇ ಧಾರಾಕಾರ ಮಳೆ ಸುರಿದ ಪರಿಣಾಮ ರೈತರು ಹಾಗೂ ಕಾರ್ಯಕರ್ತರು ಮಳೆಯಲ್ಲೇ ಸಂಭ್ರಮಾಚರಣೆ ನಡೆಸಿದರು.
ಮಾನ್ವಿ ಪಟ್ಟಣದ ಮಾರಿಕಾಂಬಾ ದೇವಿ ದೇವಸ್ಥಾನದಿಂದ ನೀರಮಾನ್ವಿಯ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನವರೆಗೆ ನಡೆದ ಪಾದಯಾತ್ರೆಗೆ ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮತ್ತು ಮಾಜಿ ಶಾಸಕ ವೆಂಕಟಪ್ಪ ನಾಯಕ್ ನೇತೃತ್ವ ವಹಿಸಿದ್ದರು. ಜೆಡಿಎಸ್ ಕಾರ್ಯಕರ್ತರು, ಮುಖಂಡರು, ರೈತರು ಹಾಗೂ ಕಲಾತಂಡದ ಸದಸ್ಯರು ಈ ಧಾರ್ಮಿಕ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆ ನಡೆಯುತ್ತಿದ್ದ ವೇಳೆ ಸುರಿದ ಭಾರೀ ಮಳೆ ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿತು. ಮಳೆಯಲ್ಲೇ ಕುಣಿದು ಕುಪ್ಪಳಿಸಿದ ರೈತರು ಮತ್ತು ಕಾರ್ಯಕರ್ತರು ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ರೈತ ಸಮುದಾಯದ ಕಲ್ಯಾಣಕ್ಕಾಗಿ ಬೇಡಿಕೊಂಡರು.



