ಮಣಿಪಾಲ: ನಾಲ್ಕು ವರ್ಷದ ಬಾಲಕಿಯ ಕಣ್ಣಿನಲ್ಲಿ ಪತ್ತೆಯಾದ ಅಪರೂಪದ ಜೀವಂತ ಪರಾವಲಂಬಿ ಹುಳುವನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಕಣ್ಣಿನ ನಿರಂತರ ಕೆಂಪಾಗುವಿಕೆ ಮತ್ತು ಕಿರಿಕಿರಿಯ ಸಮಸ್ಯೆಯೇ ಈ ಅಪರೂಪದ ಪ್ರಕರಣವನ್ನು ಪತ್ತೆಹಚ್ಚಲು ಕಾರಣವಾಗಿದೆ.
ಬಲಗಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಪರೀಕ್ಷೆ ವೇಳೆ ಕಣ್ಣಿನ ಒಳಭಾಗದಲ್ಲಿ ಅಸಹಜ ಚಲನೆ ಗಮನಿಸಿದ ವೈದ್ಯರು ಹೆಚ್ಚಿನ ತಪಾಸಣೆ ನಡೆಸಿದರು. ಸ್ಲಿಟ್ ಲ್ಯಾಂಪ್ ಪರೀಕ್ಷೆಯಲ್ಲಿ ಕಣ್ಣಿನ ಪೊರೆಯ ಕೆಳಗೆ ಜೀವಂತ ಪರಾವಲಂಬಿ ಇರುವುದನ್ನು ಪತ್ತೆಹಚ್ಚಲಾಯಿತು.
ತಕ್ಷಣವೇ ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರ ತಂಡ, ಸಾಮಾನ್ಯ ಅರಿವಳಿಕೆಯಡಿ ಎಕ್ಸಿಶನ್ ಬಯಾಪ್ಸಿ ನಡೆಸಿ ಕಣ್ಣಿನೊಳಗಿದ್ದ ಹುಳುವನ್ನು ಸುರಕ್ಷಿತವಾಗಿ ಹೊರತೆಗೆದಿದೆ.
ನಂತರ ಸೂಕ್ಷ್ಮಜೀವಶಾಸ್ತ್ರ ಪರೀಕ್ಷೆಯಲ್ಲಿ ಇದು ಡೈರೊಫಿಲೇರಿಯಾ ರೆಪೆನ್ಸ್ ಸೋಂಕು ಎಂದು ದೃಢಪಟ್ಟಿದೆ. ಸೋಂಕಿತ ಸೊಳ್ಳೆಗಳ ಮೂಲಕ ಹರಡುವ ಈ ಪರಾವಲಂಬಿ ಸಾಮಾನ್ಯವಾಗಿ ಪ್ರಾಣಿಗಳಲ್ಲಿ ಕಂಡುಬರುತ್ತದೆ. ಆದರೆ ಅಪರೂಪವಾಗಿ ಮನುಷ್ಯರ ಕಣ್ಣಿನ ಭಾಗಕ್ಕೂ ಸೋಂಕು ತಗುಲಬಹುದು.
ನೇತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಎಸ್. ಕಾಮತ್ ನೇತೃತ್ವದಲ್ಲಿ ನಡೆದ ಈ ಚಿಕಿತ್ಸೆಯಲ್ಲಿ ಡಾ. ಪ್ರಿಯಲ್ ಅಗರ್ವಾಲ್, ಡಾ. ಅಪರ್ಣಾ ಹಾಗೂ ತಂಡದ ವೈದ್ಯರು ಭಾಗವಹಿಸಿದ್ದರು.
“ಇಂತಹ ಸೋಂಕು ಅಪರೂಪವಾದರೂ, ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿದರೆ ಚಿಕಿತ್ಸೆ ಸಾಧ್ಯ. ಪುಟ್ಟ ಬಾಲಕಿ ಇದೀಗ ಸಂಪೂರ್ಣ ಆರೋಗ್ಯವಾಗಿರುವುದು ಸಂತಸದ ವಿಷಯ” ಎಂದು ಡಾ. ಯೋಗೀಶ್ ಎಸ್. ಕಾಮತ್ ಹೇಳಿದ್ದಾರೆ.
ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ, “ಈ ಪ್ರಕರಣವು ವಿವಿಧ ವಿಭಾಗಗಳ ವೈದ್ಯರ ಸಮನ್ವಯದ ಉತ್ತಮ ಉದಾಹರಣೆಯಾಗಿದೆ. ಸೊಳ್ಳೆ ನಿಯಂತ್ರಣ ಮತ್ತು ಸಾಕುಪ್ರಾಣಿಗಳ ನಿಯಮಿತ ಆರೈಕೆಯ ಅಗತ್ಯವನ್ನೂ ಇದು ತೋರಿಸುತ್ತದೆ” ಎಂದು ತಿಳಿಸಿದ್ದಾರೆ.



