ಯಾದಗಿರಿ: ಜಿಲ್ಲೆಯ ಸುರಪುರ ತಾಲೂಕಿನ ಮಾವಿನಮಟ್ಟಿ ಗ್ರಾಮದಲ್ಲಿ ಜಮೀನು ವಿವಾದದಿಂದ ಆರಂಭವಾದ ಜಗಳ ಕೊಲೆ ಮತ್ತು ಪ್ರತೀಕಾರದ ಹಿಂಸೆಗೆ ತಿರುಗಿ ಹತ್ತಾರು ಕುಟುಂಬಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಮಲ್ಲಪ್ಪ ಹಾಗೂ ಹನುಮಂತರಾಯನ ಕುಟುಂಬಗಳ ನಡುವೆ ಎರಡು ಎಕರೆ ಜಮೀನಿನ ದಾರಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಿಂದ ವೈಷಮ್ಯ ಮುಂದುವರಿದಿತ್ತು. ಇದೇ ಹಳೆ ದ್ವೇಷದ ಹಿನ್ನೆಲೆ ಹನುಮಂತರಾಯನ ಕುಟುಂಬದವರು ಸೇರಿ 27 ವರ್ಷದ ಪರಮೇಶ್ವರನನ್ನು ತಲ್ವಾರ್ ಹಾಗೂ ದೊಣ್ಣೆಗಳಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅಣ್ಣನನ್ನು ರಕ್ಷಿಸಲು ಹೋಗಿದ್ದ ರೇವಣಸಿದ್ದನಿಗೂ ಗಂಭೀರ ಗಾಯಗಳಾಗಿವೆ.
ಘಟನೆ ಸಂಬಂಧ ಕೆಂಭಾವಿ ಪೊಲೀಸರು ತ್ವರಿತ ಕ್ರಮ ಕೈಗೊಂಡು ಪ್ರಮುಖ ಆರೋಪಿಗಳಾದ ಪರಮಣ್ಣ, ದೇವಿಂದ್ರಪ್ಪ, ಚನ್ನಪ್ಪ ಮತ್ತು ಮಹದೇವಪ್ಪರನ್ನು ಬಂಧಿಸಿದ್ದಾರೆ.
ಇದೇ ವೇಳೆ ಅಣ್ಣನ ಸಾವಿನಿಂದ ಆಕ್ರೋಶಗೊಂಡ ರೇವಣಸಿದ್ದ, ಆರೋಪಿಗಳ ಕುಟುಂಬ ಊರು ಬಿಟ್ಟಿದ್ದ ಸಂದರ್ಭವನ್ನು ಬಳಸಿಕೊಂಡು ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಈ ಅಗ್ನಿಕಾಂಡದಲ್ಲಿ ಧಾನ್ಯ, ಬಟ್ಟೆ ಸೇರಿದಂತೆ ಸುಮಾರು 10 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ.
ಮನೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ರೇವಣಸಿದ್ದನನ್ನೂ ಪೊಲೀಸರು ಬಂಧಿಸಿದ್ದು, ಒಂದು ಕುಟುಂಬದ ದುಃಖ ಇನ್ನಷ್ಟು ಗಂಭೀರವಾಗುವಂತಾಗಿದೆ.



