HomeDharwadಕಳಪೆ ಬದನೆ ಸಸಿ ಮಾರಾಟ: ನರ್ಸರಿಗೆ ₹6.25 ಲಕ್ಷ ದಂಡ

ಕಳಪೆ ಬದನೆ ಸಸಿ ಮಾರಾಟ: ನರ್ಸರಿಗೆ ₹6.25 ಲಕ್ಷ ದಂಡ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಧಾರವಾಡ: ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ಹಸಿರು ಬದನೆ ಸಸಿಗಳೆಂದು ನಂಬಿಸಿ ಕಳಪೆ ಗುಣಮಟ್ಟದ ಬಿಳಿ ಬದನೆ ಸಸಿಗಳನ್ನು ರೈತರಿಗೆ ಮಾರಾಟ ಮಾಡಿದ್ದ ತಡಕೋಡದ ಕೆ.ಕೆ. ಅಗ್ರಿ ನರ್ಸರಿಗೆ ಒಟ್ಟು ₹6.25 ಲಕ್ಷ ಪರಿಹಾರ ನೀಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಧಾರವಾಡ ತಾಲೂಕಿನ ಮಂಗಳಗಟ್ಟಿ ಹಾಗೂ ಮುಳಮುತ್ತಲ ಗ್ರಾಮದ ರೈತರಾದ ವಿರುಪಾಕ್ಷಪ್ಪ ಸಬರದ, ಬಾಳಪ್ಪ ಪೂಜಾರ, ಶಂಕರಗೌಡ ಗೌಡರ, ನಾಗಪ್ಪ ಮುಮ್ಮಿಗಟ್ಟಿ ಹಾಗೂ ಯಲ್ಲನಗೌಡ ಪಾಟೀಲ ಅವರು ತಮ್ಮ ಜಮೀನುಗಳಲ್ಲಿ ನಾಟಿ ಮಾಡಲು ಕೆ.ಕೆ. ಅಗ್ರಿ ನರ್ಸರಿಯಿಂದ ಬದನೆ ಸಸಿಗಳನ್ನು ಖರೀದಿಸಿದ್ದರು.

ನರ್ಸರಿಯವರು ಉತ್ತಮ ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ಹಸಿರು ಬದನೆಕಾಯಿ ತಳಿಯ ಸಸಿಗಳು ಎಂದು ರೈತರನ್ನು ನಂಬಿಸಿ ಸಸಿಗಳನ್ನು ಮಾರಾಟ ಮಾಡಿದ್ದರು. ರೈತರು ಸಸಿಗಳನ್ನು ಜಮೀನಿನಲ್ಲಿ ನಾಟಿ ಮಾಡಿ, ಸೂಕ್ತ ಗೊಬ್ಬರ ಹಾಗೂ ನೀರು ನೀಡಿ ಆರೈಕೆ ಮಾಡಿದ್ದರು.

ಆದರೆ ಬೆಳೆ ಬಂದಾಗ ಹಸಿರು ಬದನೆಕಾಯಿ ಬದಲಾಗಿ ಬಿಳಿ ಬದನೆಕಾಯಿ ಬಂದಿದ್ದು, ನರ್ಸರಿಯವರು ಹೇಳಿದ್ದಕ್ಕಿಂತ ಅತ್ಯಂತ ಕಡಿಮೆ ಇಳುವರಿ ದೊರೆತಿದೆ. ಇದರಿಂದ ತಮಗೆ ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ ಎಂದು ರೈತರು ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಕೆ.ಕೆ. ಅಗ್ರಿ ನರ್ಸರಿಯವರಿಂದ ಸೇವಾ ನ್ಯೂನತೆ ಉಂಟಾಗಿದೆ ಎಂದು ಆರೋಪಿಸಿ ಐವರು ರೈತರು 2026ರ ಮಾರ್ಚ್ 5ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದ್ದರು.

ವಿಚಾರಣೆಗೆ ಹಾಜರಾಗದ ನರ್ಸರಿ

ದೂರುಗಳ ವಿಚಾರಣೆ ನಡೆಸಿದ ಆಯೋಗ, ಎದುರುದಾರರಾದ ಕೆ.ಕೆ. ಅಗ್ರಿ ನರ್ಸರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ನರ್ಸರಿಯವರು ಆಯೋಗದ ಮುಂದೆ ಹಾಜರಾಗದೆ ಗೈರು ಉಳಿದಿದ್ದರು.

ರೈತರ ದೂರಿನ ಹಿನ್ನೆಲೆಯಲ್ಲಿ ಧಾರವಾಡ ತೋಟಗಾರಿಕೆ ಇಲಾಖೆ, ಬಾಗಲಕೋಟೆ ತೋಟಗಾರಿಕೆ ಇಲಾಖೆಯ ವಿಜ್ಞಾನಿಗಳು ಹಾಗೂ ಅಧಿಕಾರಿಗಳಿಗೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬದನೆ ಬೆಳೆ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿತ್ತು.

ಅದರಂತೆ ತಜ್ಞರು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ನಡೆಸಿ, ಕಳಪೆ ಗುಣಮಟ್ಟದ ಬಿಳಿ ಬದನೆ ಸಸಿಗಳನ್ನು ಮಾರಾಟ ಮಾಡಿರುವುದರಿಂದ ರೈತರಿಗೆ ನಷ್ಟ ಉಂಟಾಗಿದೆ ಎಂದು ವರದಿ ನೀಡಿದ್ದರು.

ತಜ್ಞರ ವರದಿ ಸೇರಿದಂತೆ ಲಭ್ಯವಿದ್ದ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ, ಕೆ.ಕೆ. ಅಗ್ರಿ ನರ್ಸರಿಯವರಿಂದ ರೈತರಿಗೆ ಸೇವಾ ನ್ಯೂನತೆ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದೆ.

ತಲಾ ₹1.25 ಲಕ್ಷ ಪರಿಹಾರ

ರೈತರಿಗೆ ಉಂಟಾದ ಬೆಳೆ ನಷ್ಟ, ಅನಾನುಕೂಲ ಹಾಗೂ ಮಾನಸಿಕ ಹಿಂಸೆಯನ್ನು ಪರಿಗಣಿಸಿದ ಆಯೋಗ, ಐವರು ರೈತರಿಗೆ ತಲಾ ₹1.25 ಲಕ್ಷದಂತೆ ಒಟ್ಟು ₹6.25 ಲಕ್ಷ ಪರಿಹಾರ ನೀಡುವಂತೆ ಕೆ.ಕೆ. ಅಗ್ರಿ ನರ್ಸರಿಗೆ ನಿರ್ದೇಶಿಸಿದೆ.

ತೀರ್ಪು ನೀಡಿದ ಒಂದು ತಿಂಗಳೊಳಗೆ ಪರಿಹಾರ ಮೊತ್ತವನ್ನು ರೈತರಿಗೆ ಪಾವತಿಸಬೇಕು ಎಂದು ಗ್ರಾಹಕರ ಆಯೋಗ ಆದೇಶಿಸಿದೆ.

ಐವರು ರೈತರಿಗೆ ತಲಾ ₹1.25 ಲಕ್ಷ — ಒಟ್ಟು ₹6.25 ಲಕ್ಷ ಪರಿಹಾರ ದೊರಕಿದಂತಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img