ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರು ಯಾವುದೇ ತಪ್ಪು ಮಾಡಿಲ್ಲ. ಅವರು ಕಾನೂನು ಚೌಕಟ್ಟಿನಲ್ಲೇ ವ್ಯವಹಾರ ನಡೆಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಅವರು ತಮ್ಮ ಸಹೋದ್ಯೋಗಿ. ಅವರು ಯಾವುದೇ ತಪ್ಪು ಮಾಡಿಲ್ಲ. ಹೊರಗಡೆ ಹೋಗಬಾರದು, ವ್ಯವಹಾರ ಮಾಡಬಾರದು ಎಂದು ಎಲ್ಲಿಯೂ ಇಲ್ಲ. ಈ ವಿಚಾರದಲ್ಲಿ ನಡೆಯುತ್ತಿರುವುದು ರಾಜಕೀಯ ಅಷ್ಟೇ ಎಂದು ಹೇಳಿದ್ದಾರೆ.
ಇದೇ ವೇಳೆ, ಇನ್ನೂ ಮೂರ್ನಾಲ್ಕು ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ. ಇಡೀ ಕಾಂಗ್ರೆಸ್ ಪಕ್ಷವನ್ನೇ ಟ್ರ್ಯಾಪ್ ಮಾಡಲು ತಯಾರಿ ನಡೆಸಲಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬಿಜೆಪಿ ನಾಯಕರ ವಿರುದ್ಧ ಇಂತಹ ದಾಳಿಗಳು ನಡೆಯುತ್ತಿಲ್ಲ. ಇದು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ವಿಚಾರವಲ್ಲ. ಇಡೀ ಕಾಂಗ್ರೆಸ್ ಪಕ್ಷವನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು ವಂದೇ ಮಾತರಂ ಗೀತೆಯನ್ನು ಮೊಟಕು ಮಾಡಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ವಂದೇ ಮಾತರಂ ಬಗ್ಗೆ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಈ ವಿಚಾರದಲ್ಲೂ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅರಣ್ಯ ಹುತಾತ್ಮರಿಗೆ ಗೌರವ ಸಲ್ಲಿಸಿದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರೂ ಭತ್ಯೆಗಾಗಿ ಮನವಿ ಮಾಡುತ್ತಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಕಾನೂನುಬಾಹಿರವಾಗಿ ಬಂದೂಕು ಹೊಂದಿರುವವರು ಕೂಡಲೇ ಅದನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಡಿಕೆ ಶಿವಕುಮಾರ್ ಸೂಚಿಸಿದ್ದಾರೆ. ಬಂದೂಕು ಶರಣಾಗತಿಗೆ ನವೆಂಬರ್ 1ರವರೆಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸರು ಹಾಗೂ ಅಧಿಕಾರಿಗಳು ಜನರ ಮನವೊಲಿಸಬೇಕು. ಬಂದೂಕು ಶರಣಾಗತಿಗೆ ಮುಂದಾಗುವವರು ಕ್ಷಮೆಯಾಚನೆ ಪತ್ರವನ್ನು ಸಲ್ಲಿಸಿದರೆ ಸಾಕು ಎಂದು ಅವರು ಹೇಳಿದ್ದಾರೆ.



